ಸಾಣೇಹಳ್ಳಿಯಲ್ಲಿನ ರಾಷ್ಟ್ರೀಯ ನಾಟಕೋತ್ಸವದ ಚಿಂತನಾ ಗೋಷ್ಠಿಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ, ನ.8- ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೇಳಿದ ಒಳ್ಳೆಯ ಮಾತುಗಳನ್ನು ಆಗಿಂದಾಗಲೇ ಬದುಕಿ ನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಶ್ರವಣ, ಮನನ ಮತ್ತು ನಿಧಿದ್ಯಾಸನ ಬದುಕಿನ ಪ್ರಗತಿಗೆ ಪೂರಕವಾದವು. ನಡೆ-ನುಡಿ ಸಿದ್ಧಾಂತ ಅಂದರೆ ನುಡಿದಂತೆ ನಡೆಯುವುದು ಮತ್ತು ನಡೆದಂತೆ ನುಡಿಯುವುದು. ಇದು ಅತ್ಯಂತ ಸರಳ. ಆದರೆ ಇದನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು.
ಚೆನ್ನಬಸವಣ್ಣನವರು ತಿಳಿಯುವುದು ಜ್ಞಾನ, ಅದರಂತೆ ನಡೆದುಕೊಳ್ಳುವುದೇ ಕ್ರಿಯೆ ಎಂದರು. ನುಡಿದಂತೆ ನಡೆದರೆ ಸಮಾಜದಲ್ಲಿ ಗೌರವ ಸಿಗುವುದಲ್ಲದೆ ಬದುಕು ಮೌಲ್ಯಯುತವಾಗುವುದು. ಶರಣರು ದೇವರಿಗೇ ಸವಾಲು ಹಾಕಿ ಅದರಂತೆ ಬದುಕಿ ತೋರಿಸಿದರು. ಇಂಥ ಸಂಕಲ್ಪ ನಮ್ಮವೂ ಆಗಬೇಕು. ಸಂಕಲ್ಪ ಮಾಡುವುದು ದೊಡ್ಡದಲ್ಲ; ಅದರಂತೆ ನಡೆದುಕೊಳ್ಳುವುದೇ ದೊಡ್ಡದು. ಚಂಚಲ ಮನಸ್ಸನ್ನು ಹತೋಟಿಯಲ್ಲಿಡುವವನೇ ಮಹಾತ್ಮನಾಗುವನು. ಮಹಾತ್ಮರೆಲ್ಲರೂ ನುಡಿದಂತೆ ನಡೆದುಕೊಂಡವರು. ಅವರಿಂದ ನಾವೂ ಸ್ಪೂರ್ತಿಯನ್ನು ಪಡೆದು ಅವರಂತೆ ಬದುಕುವ ಪ್ರಯತ್ನ ಮಾಡುವುದೇ ನಿಜವಾದ ಶಿಕ್ಷಣ. ಮರುಗುವುದೇ ಧರ್ಮ; ಕರುಬುವುದಲ್ಲ. ಯಕಃಶ್ಚಿತ್ ಪ್ರಾಣಿಗಳೇ ತಮ್ಮ ಧರ್ಮವನ್ನು ಬಿಡದಿರುವಾಗ ಮಾನವರಾದ ನಾವು
ಮಾನವೀಯತೆಯನ್ನು ಬಿಡುವುದು ಸರಿಯಲ್ಲ. ವಿದ್ಯಾವಂತರಲ್ಲೇ ನಡೆ-ನುಡಿಗಳಲ್ಲಿನ ಅಂತರ ಹೆಚ್ಚುತ್ತಿವೆ. ಹೀಗಾಗಿ ಅವರ ಬಗೆಗೆ ಜನರಲ್ಲಿ ಒಲವು, ಪ್ರೀತಿ ಉಳಿಯುತ್ತಿಲ್ಲ. ಬುದ್ಧ, ಬಸವ, ಗಾಂಧಿ ಮೊದಲಾದ ಮಹಾತ್ಮರು ತಮ್ಮ ದೋಷಗಳನ್ನು ಸರಿಪಡಿಸಿಕೊಳ್ಳುತ್ತಾ ಹೋದರು. ಅವರಂತೆ ನಾವೂ ಮಹಾತ್ಮರಾಗಲು ಸಾಧ್ಯ ಎಂದು ಅಶಿಸಿದರು.
`ನಡೆ-ನುಡಿ ಸಿದ್ಧಾಂತ’ ಕುರಿತಂತೆ ದಾವಣಗೆರೆಯ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಪೂಜ್ಯರು ಸದಾ ಕರುಣೆ, ಪ್ರೀತಿ, ಮೈತ್ರಿಯನ್ನು ತೋರಿಸಿದ್ದಾರೆ. ಎಲ್ಲ ಕಡೆಯಲ್ಲೂ ಬಾಯಿಮುಚ್ಚಿಸುವ ಕಾಲಘಟ್ಟದಲ್ಲಿ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಹೊಲಿಕೆ, ಹೊಟ್ಟೆಕ್ಕಿಚ್ಚಿನಲ್ಲಿ ಜಗತ್ತು ಬಳಲುತ್ತಿದೆ. ಉಪಯೋಗಿಸು ಅಥವ ಕಳೆದು ಕೋ ಎನ್ನುವ ಮಾತು ಆಂಗ್ಲಭಾಷೆಯಲ್ಲಿ ಚಾಲ್ತಿಯಿದೆ. 20 ವರ್ಷ ಚೆನ್ನಾಗಿ ಅಧ್ಯಯನ ಮಾಡಿ ಸಂಸ್ಕಾರ ಬೆಳೆಸಿಕೊಂಡರೆ ಮುಂದಿನ 80 ವರ್ಷ ನೆಮ್ಮದಿಯಿಂದ ಬಾಳಬಹುದು. ಬದುಕಿಗೆ ಬಹಳ ಮುಖ್ಯವಾಗಿ ಬೇಕಾಗುವುದು ನಿರಹಂಕಾರ, ನಿಷ್ಕಲ್ಮಷ ಪ್ರೇಮ, ನಿರ್ಭಯ. ಯಾರ ಬಗ್ಗೆಯಾದರೂ ಏನಾದರೂ ಮಾತನಾಡುವ ಮೊದಲು ಅದು ಸತ್ಯವೇ, ಅದರಿಂದ ನನಗೆ, ಸಮಾಜಕ್ಕೆ ಉಪಯೋಗವಾ ಗುತ್ತದೆಯೇ ಎನ್ನುವುದನ್ನು ಯೋಚಿಸಬೇಕು. ನುಡಿದಂತೆ ನಡೆದವರು ಮಾತ್ರ ಮಹಾತ್ಮರಾಗಲು ಸಾಧ್ಯ. ಸಮಾಜದ ಮೌಲ್ಯಗಳಿಗೆ ನಾವು ಬದ್ಧರಾಗಿರಬೇಕು. ನಮಗೆ ನಾವು ಮೋಸ ಮಾಡಿಕೊಂಡರೆ ಮಹಾತ್ಮರಾಗಲು ಸಾಧ್ಯವಿಲ್ಲ. ಹಗುರಾದ ಮೈ, ಹಂಗಿಲ್ಲದ ಬದುಕು, ಹಗೆಯಿಲ್ಲದ ಮನಸ್ಸುಗಳು ಆದಯ ಮತ್ತು ಆರೋಗ್ಯಕ್ಕೆ ಮೂಲಸೆಲೆಗಳು. ನಾನು, ನನ್ನಿಂದಲೇ ಎನ್ನುವುದನ್ನು ಬಿಡಬೇಕು. ಹಸಿವು, ಸಾಲ, ಆರೋಗ್ಯ, ಸಂಬಂಧಗಳೇ ಬದುಕಿಗೆ ಸಮಸ್ಯೆಗಳನ್ನು ತಂದೊಡ್ಡುವವು. ಇವುಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಶರಣರು `ನುಡಿಯಬಾರದು ಕೆಟ್ಟ ನುಡಿಗಳ, ನಡೆಯಬಾರದು. ಕೆಟ್ಟ ನಡೆಗಳನ್ನು’ ಎಂದು ಹೇಳಿ ಅದರಂತೆ ನಡೆದರು. ಆದ್ದರಿಂದಲೇ ಅಲ್ಲಿ ಕಲ್ಯಾಣ ಸೃಷ್ಟಿಯಾಯಿತು. ನಮಗೆ ನಾವೇ ಶತ್ರುಗಳು ಮತ್ತು ಮಿತ್ರರು. ವಿನಮ್ರತೆ, ಪ್ರೀತಿಗೆ ಬಹಳ ದೊಡ್ಡ ಶಕ್ತಿಯಿದೆ. ಬ್ರೈನ್‌ಗೆ ಸುಳ್ಳು, ಸತ್ಯಗಳು ಗೊತ್ತಾಗುವುದಿಲ್ಲ. ಅದು ನಾವು ತರಬೇತಿಗೊಳಿಸಿದಂತೆ ಅದು ನಡೆದುಕೊಳ್ಳುತ್ತದೆ. ಆದರೆ ಹೃದಯಕ್ಕೆ ಸುಳ್ಳು, ಸತ್ಯದ ಅರಿವಾಗುತ್ತದೆ. ಹಾಗಾಗಿ ನಾವು ಹೃದಯದ ಮಾತನ್ನು ಕೇಳಬೇಕೇ ಹೊರತು; ಬುದ್ಧಿಯ ಮಾತನ್ನಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಲು ನಡೆ-ನುಡಿಯನ್ನು ಒಂದಾಗಿಸಿಕೊಳ್ಳಬೇಕು ಎಂದರು.
ಸಂಗೀತ ಶಿಕ್ಷಕ ಹೆಚ್. ಎಸ್. ನಾಗರಾಜ್ ಮತ್ತು ಕೆ. ಜ್ಯೋತಿ ಧ್ಯಾನ, ಮೌನ, ವಚನ ಪ್ರಾರ್ಥನೆ, ಶಿವಮಂತ್ರಲೇಖನ, ಶಿಕ್ಷಕಿ ದೀಪಾ ಕಾರ್ಯಕ್ರಮ ನಡೆಸಿಕೊಟ್ಟರು.