ದಾವಣಗೆರೆ, ನ.8- ಜಾಗತಿಕ ಮಟ್ಟದ ಕಂಪನಿಗಳಲ್ಲಿ ಕೆಲಸ ಮಾಡಲು ಕೌಶಲ್ಯಗಳೇ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಸಚಿವ ಡಾ.ಆರ್. ಶಶಿಧರ ಹೇಳಿದರು.
ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಗುರುವಾರ ಆಯೋಜಿ ಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬ್ಯಾಂಕಿಂಗ್ ಪರೀಕ್ಷೆಗಳು ನಡೆಯುತ್ತವೆ. ಅವುಗಳನ್ನು ತಿಳಿದು ಪೂರಕ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಹೊನ್ನಾಳಿ ಜಿಎಫ್‌ಜಿಸಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ. ಧನಂಜಯ ಮಾತನಾಡಿ, ಯುವಕರಿಂದ ಸದೃಢ ಸಮಾಜ ಕಟ್ಟಲು ಸಾಧ್ಯ. ಹಾಗಾಗಿ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಸಾಮಾಜಿಕ ಕಳಕಳಿ ರೂಢಿಸಿಕೊಳ್ಳಬೇಕು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬಗೆೆ ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ಜ್ಞಾನ ಸಂಪಾದನೆಗೆ ಮಹತ್ವ ನೀಡಬೇಕು ಎಂದು ಹೇಳಿದರು. ಮಾಜಿ ಶಾಸಕ ಪ್ರೊ. ಎನ್. ಲಿಂಗಣ್ಣ ಮಾತನಾಡಿ, ವಿದ್ಯಾರ್ಥಿಗಳು ಸರಳತೆ, ಸನ್ನಡತೆ, ಶಿಸ್ತು, ಗೌರವ, ತಾಳ್ಮೆ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಎಆರ್ಎಂ ಕಾಲೇಜಿನ ಪ್ರಾಚಾರ್ಯ ಎಂ.ಡಿ ಅಣ್ಣಯ್ಯ, ವೇದಿಕೆ ಮೇಲೆ ಎ.ಡಿ.ವಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ, ಸೋಮಶೇಖರ ಬಿ. ಕಿಚಡಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಿ. ಅಂಜಿನಪ್ಪ, ಎಂ.ಕಾಂ ವಿಭಾಗದ ಮುಖ್ಯಸ್ಥ ಸಿ.ಡಿ ತ್ರಿವೇಣಿ ಮತ್ತಿತರರಿದ್ದರು.