‘ಲಕ್ವಾ’ ಬರೀ ಹಿರಿಯರಿಗೆ ಸಂಭವಿಸುವ ರೋಗವಲ್ಲ; ಸಾತ್ವಿಕ ಆಹಾರ, ಶ್ರಮದ ಚಟುವಟಿಕೆ ರೋಗಕ್ಕೆ ಮದ್ದು…

‘ಲಕ್ವಾ’ ಬರೀ ಹಿರಿಯರಿಗೆ ಸಂಭವಿಸುವ ರೋಗವಲ್ಲ; ಸಾತ್ವಿಕ ಆಹಾರ, ಶ್ರಮದ ಚಟುವಟಿಕೆ ರೋಗಕ್ಕೆ ಮದ್ದು…

ಬಾಪೂಜಿ ಮಕ್ಕಳ ಆಸ್ಪತ್ರೆ ವಿವೇಕ ಪೋಷಕರ ಆರೋಗ್ಯ ಕಾರ್ಯಕ್ರಮದಲ್ಲಿ ಡಾ.ವೀರಣ್ಣ ಗಡದ್

ದಾವಣಗೆರೆ, ನ.8- ಮಿದುಳಿನ ನಿರ್ದಿಷ್ಟ ಭಾಗದಲ್ಲಿ ರಕ್ತ ಸಂಚಾರ  ಏರುಪೇರು ಆಗಿ, ವ್ಯತ್ಯಾಸವಾದಾಗ ಆಗುವಂತಹ ಸಮಸ್ಯೆಯೇ ಪಾರ್ಶ್ವವಾಯು ಅಥವಾ ಲಕ್ವಾ    ಎಂದು ಎಸ್.ಎಸ್. ನಾರಾಯಣ ಆಸ್ಪತ್ರೆ ನರರೋಗ ತಜ್ಞ ಡಾ. ವೀರಣ್ಣ ಗಡದ್ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ  ಪಾರ್ಶ್ವವಾಯು ದಿನದ ಅಂಗವಾಗಿ  ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಹಮ್ಮಿಕೊಳ್ಳಲಾಗಿದ್ದ `ಪಾರ್ಶ್ವವಾಯುವಿನ ಬಗ್ಗೆ ಅರಿವಿರಲಿ’ ಎಂಬ ವಿಷಯವಾಗಿ ಅವರು ಮಾತನಾಡಿದರು.

ಜೋಲಿ ಹೋಗುವುದು, ಕಣ್ಣು ಮಂಜಾ ಗುವುದು, ಬಾಯಿ  ಸೊಟ್ಟಗಾಗುವುದು, ಕೈ, ಕಾಲು ಸ್ವಾಧೀನ ಕಳೆದುಕೊಳ್ಳುವುದು, ಮಾತು ತೊದಲುವುದು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಅದು ಪಾರ್ಶ್ವವಾಯ ಎಂದು ತಿಳಿದು ತಕ್ಕಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು.

ಪಾರ್ಶ್ವವಾಯು ಸಂಭವಿಸಿದಾಗ ಕೊಬ್ಬರಿ ಎಣ್ಣೆ ಕುಡಿಸಿದರೆ ಸರಿಯಾಗುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ಇದೆ, ಇದು ತಪ್ಪು ಅಭಿಪ್ರಾಯ.  ನಾಟಿ ಔಷಧದಿಂದಲೂ ರೋಗ ವಾಸಿಯಾಗುತ್ತದೆ ಎಂಬುದೂ ತಪ್ಪು ಕಲ್ಪನೆ. ಇಂತಹ ಮೌಢ್ಯಗಳನ್ನು ಬಿಡಬೇಕು. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಡಾಕ್ಟರ್ ಸಲಹೆ ನೀಡಿದರು.

ಐದು ಮನೆಗಳಿಗೆ ಒಬ್ಬರಂತೆ ಪಾರ್ಶ್ವ ವಾಯು ಪೀಡಿತರಿದ್ದು, ನಮ್ಮ ದಿನನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿ, ಸೊಪ್ಪು, ಹಾಲು-ಮೊಟ್ಟೆ ಮುಂತಾಗಿ ಸಾತ್ವಿಕ ಆಹಾರ ಸೇವಿಸುವ ಮೂಲಕ ರೋಗದಿಂದ ದೂರ ಇರಬಹುದು. ಅಲ್ಲದೇ  ವ್ಯಾಯಾಮ, ನಡಿಗೆ ಇತ್ಯಾದಿ ದೇಹಕ್ಕೆ ಶ್ರಮ ಕೊಡುವ ಚಟುವಟಿಕೆಗಳನ್ನು ಅಗತ್ಯವಾಗಿ ಮಾಡಬೇಕು. 50 ವರ್ಷ ಮೇಲ್ಪಟ್ಟವರು ಪ್ರತಿವರ್ಷವೂ  ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 

ಸರಳ ಜೀವನ ಶೈಲಿ ಇರಬೇಕು.  ಸಕ್ಕರೆ ಕಾಯಿಲೆ,  ತೀವ್ರ ರಕ್ತದ ಒತ್ತಡ ಹಾಗೂ ದೇಹ ದಲ್ಲಿ ಕೊಬ್ಬಿನಾಂಶ ಹೆಚ್ಚಾದಾಗಲೂ ಪಾರ್ಶ್ವ ವಾಯ ಸಂಭವಿಸುತ್ತದೆ. ಜೊತೆಗೆ ಧೂಮಪಾನ ಮತ್ತು ಮದ್ಯಪಾನ ಮಾಡುವ ಮತ್ತು ಜೆನೆಟಿಕ್ ಸಮಸ್ಯೆಗಳಿಂದಲೂ ಬರಬಹುದಾಗಿದೆ.

ಬರೀ ಹಿರಿಯ ನಾಗರಿಕರೇ ಹೆಚ್ಚಾಗಿ ಈ ರೋಗದಿಂದ ಬಳಲುತ್ತಾರೆ ಎಂದು ಅಸಡ್ಡೆ ಮಾಡುವಂತಿಲ್ಲ. ಕಿರಿಯ ವಯಸ್ಸಿನವರಲ್ಲೂ ಮತ್ತು ಮಕ್ಕಳಲ್ಲಿಯೂ ಸಹ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿ ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ  ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಆಸ್ಪತ್ರೆಯ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ. ರೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!