ಪತ್ರಕರ್ತ ವೀರಪ್ಪ ಭಾವಿ ಅವರಿಗೆ ವರದಿಗಾರರ ಕೂಟದಿಂದ ಶ್ರದ್ಧಾಂಜಲಿ

ಪತ್ರಕರ್ತ ವೀರಪ್ಪ ಭಾವಿ ಅವರಿಗೆ  ವರದಿಗಾರರ ಕೂಟದಿಂದ ಶ್ರದ್ಧಾಂಜಲಿ

ದಾವಣಗೆರೆ, ನ. 7 – ಹಿರಿಯ ಪತ್ರ ಕರ್ತರೂ ಆದ `ಇಂದಿನ ಸುದ್ದಿ’ ಸಂಪಾದಕ ವೀರಪ್ಪ ಎಂ. ಭಾವಿ ಅವರ  ನಿಧನಕ್ಕೆ ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್, ಸಾಮಾಜಿಕ ಕಳಕಳಿಯ ಜೊತೆ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದ ವೀರಪ್ಪ ಭಾವಿ ಅವರ ಅಗಲಿಕೆ ಪತ್ರಕರ್ತರಿಗೆ ತುಂಬಲಾರದ ನಷ್ಟವಾಗಿದೆ. ಅವರು ಇತರರೊಂದಿಗೆ ಮಾಹಿತಿ ಹಂಚಿಕೆ ಮತ್ತು ಪಡೆಯುತ್ತಿದ್ದರು ಎಂದು ಸ್ಮರಿಸಿದರು.

ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ್ ಮಾತನಾಡಿ, ವೀರಪ್ಪ ಭಾವಿ ಅವರು ತನಗೆ ನೀಡಿದ್ದ ಕೆಲವು ಮಾರ್ಗದರ್ಶನಗಳಿಂದಾಗಿ ಅಂದಿನ ನಗರ ಸಭೆಯ ಆಡಳಿತಾತ್ಮಕ ಬದಲಾವಣೆಗೆ ಕಾರಣವಾಗಿದ್ದವು ಎಂದು ಹೇಳಿದರು.

ದಾವಣಗೆರೆ ಟೈಮ್ಸ್ ಸಂಪಾದಕ ಜಿ.ಎಸ್.ವೀರೇಶ್ ಮಾತನಾಡಿ, ಅವರು ನಮ್ಮ  ಪತ್ರಿಕೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆನ್ನುವುದನ್ನು ತೋರಿಸಿಕೊಟ್ಟು, ನಮ್ಮಲ್ಲಿ ಭರವಸೆ ತುಂಬಿ ಮಾರ್ಗದರ್ಶನ ನೀಡಿ ಪತ್ರಿಕಾ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಕಾರಣರಾಗಿದ್ದರು ಎಂದರು.

ವಿಜಯವಾಣಿಯ ಹಿರಿಯ ಪತ್ರಕರ್ತ ರಮೇಶ್ ಜಹಗೀರ್‍ದಾರ್ ಮಾತನಾಡಿ,  ಯಾವುದೇ ವ್ಯಕ್ತಿಯಾಗಲೀ ಗೌರವದಿಂದ ಕಾಣುವ ವ್ಯಕ್ತಿತ್ವ ವೀರಪ್ಪ ಭಾವಿ ಅವರದಾಗಿತ್ತು ಎಂದು ಹೇಳಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್ ಮಾತನಾಡಿ, ವೀರಪ್ಪ ಭಾವಿ ಅವರದು   ಪತ್ರಿಕಾ ರಂಗಕ್ಕೆ ಯಾರೇ ಹೊಸದಾಗಿ ಬರಲಿ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಮೂಲಕ ನೈತಿಕ ಬೆಂಬಲ ನೀಡುತ್ತಿದ್ದ ವ್ಯಕ್ತಿತ್ವ ಎಂದು ಸ್ಮರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಇ.ಎಂ.ಮಂಜುನಾಥ ಮಾತನಾಡಿ, ಅಚ್ಚುಮೊಳೆ ಕಾಲದಿಂದಲೂ ಬಾಂಧವ್ಯ ಹೊಂದಿದ್ದ ವೀರಪ್ಪ ಭಾವಿ ಮತ್ತು ನಮ್ಮ ಬಾಂಧವ್ಯ ಇಂದಿನ ಆಧುನಿಕ ಕಾಲದ ತಂತ್ರಜ್ಞಾನದವರೆಗೂ ಅದೇ ರೀತಿ ಮುಂದುವರೆದುಕೊಂಡು ಬಂದಿದೆ. ಪತ್ರಿಕೆಯನ್ನು ಯಾವ ರೀತಿ ನಡೆಸಬೇಕೆನ್ನುವುದನ್ನು ತಿಳಿಸಿಕೊಟ್ಟ ವ್ಯಕ್ತಿತ್ವ ಅವರದು ಎಂದು ಹೇಳಿದರು.

ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ಖಜಾಂಚಿ ಈ. ಪವನ್‍ಕುಮಾರ್, ಪದಾಧಿಕಾರಿಗಳಾದ ರವಿಬಾಬು, ಬಿ.ಸಿಕಂದರ್, ತೇಜಸ್ವಿ ಪ್ರಕಾಶ್, ದೇವಿಕಾ ಸುನೀಲ್, ಐ.ಗುರು ಶಾಂತಪ್ಪ, ಬಿ.ರಾಮಮೂರ್ತಿ, ಸುರೇಶ್ ಕುಣಿಬೆಳಕೆರೆ, ಚನ್ನಬಸವ ಶೀಲವಂತ್, ಪಿ.ಎಸ್.ಲೋಕೇಶ್, ಬಸವರಾಜ್ ದೊಡ್ಮನಿ, ಮಹಾದೇವ, ಜಿಗಳಿ ಪ್ರಕಾಶ್, ಡಿ.ನೂರುಲ್ಲಾ, ಶಿವರಾಜ್ ಈಳೀಗೇರ, ಸಂಜಯ್, ಪರಶುರಾಮ ಇತರರು ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!