ದಾವಣಗೆರೆ, ನ. 7- ವಿಶ್ವ ಮಧ್ವ ಮಹಾಪರಿಷತ್ ದಾವಣಗೆರೆ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನಗರಕ್ಕಾಗಮಿಸಿದ್ದ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಗರದ ಪಿ.ಜೆ. ಬಡಾವಣೆಯ ರಾಯರ ಮಠದಲ್ಲಿ ರಜತ ಮಹೋತ್ಸವದ ಉದ್ಘಾಟನೆ ನೆರವೇರಿಸಿ, ಭಕ್ತಾದಿಗಳಿಗೆ ಆಶೀರ್ವಚನ ಹಾಗೂ ಅನುಗ್ರಹ ಸಂದೇಶ ನೀಡಿದರು.
ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ ಧರ್ಮದ ಪ್ರಚಾರ, ಸಂಸ್ಕಾರ, ಆರೋಗ್ಯ ಪ್ರಾಪ್ತಿ ಮುಂತಾದವುಗಳು ಸಕಲರಿಗೆ ದೊರೆಯಬೇಕೆಂದು ವಿಶ್ವ ಮಧ್ವ ಮಹಾ ಪರಿಷತ್ ಎಂಬ ಬೃಹತ್ತಾದ ಸಂಸ್ಥೆಯನ್ನು ಸ್ಥಾಪನೆ ಮಾಡ ಲಾಗಿದೆ. ಭಾರತ ದೇಶದ ಅನೇಕ ರಾಜ್ಯಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಅನೇಕ ಜ್ಞಾನ ಸತ್ರಗಳು, ವೈದ್ಯಕೀಯ ಶಿಬಿರಗಳು, ಸಾಮಾಜಿಕ ಕಾರ್ಯಗಳು ಜರುಗಿ ಸಾವಿರಾರು ಜನರಿಗೆ ಲಾಭವಾಗಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಇದರ ಕಾರ್ಯಕ್ರಮಗಳು ನಡೆಯುತ್ತಿವೆ.
ರಜತ ಮಹೋತ್ಸವದ ಅಂಗವಾಗಿ ಒಂದು ವರ್ಷ ಪರ್ಯಂತ ಡಿಸೆಂಬರ್ 24 ರಿಂದ ನವೆಂಬರ್ 25 ರವರೆಗೆ ಪ್ರತಿ ತಿಂಗಳು ಒಬ್ಬ ಶ್ರೇಷ್ಠ ವಿದ್ವಾಂಸರಿಂದ ಮಹಾಭಾರತದ ಪ್ರವಚನ ಹಾಗೂ ರಜತ ಮಹೋ ತ್ಸವದ ವರ್ಷದಲ್ಲಿ ಅನೇಕ ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉತ್ತರಾದಿ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.