ಹರಪನಹಳ್ಳಿ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ನ.7- ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಸದುಪ ಯೋಗಪಡಿಸಿಕೊಂಡು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಗುರುಭವನದ ಮುಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ನೂತನ ವಿದ್ಯಾರ್ಥಿ ನಿಲಯವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಹರಪನಹಳ್ಳಿ ಶೈಕ್ಷಣಿಕವಾಗಿ ಮುಂದುವರೆದ ತಾಲ್ಲೂಕು, ಇಲ್ಲಿ ಹೆಚ್ಚು ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ, ಅಂತಹ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕೊರತೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ, ಸಿಎಂ ಅವರು ಅಂದೇ ಹೊಸ ವಸತಿ ನಿಲಯ ಮಂಜೂರಾತಿ ಆದೇಶ ಮಾಡಿಸಿದರು ಎಂದು ತಿಳಿಸಿದರು.
ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗ ಲೆಂದು ಇನ್ನೂ ಹೆಚ್ಚಿನ ವಸತಿ ನಿಲಯಗಳ ಮಂಜೂರಾತಿಗೆ ಪ್ರಯತ್ನ ಮಾಡುತ್ತೇನೆ. ಮಕ್ಕಳು ಸಹ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ತಂದೆ, ತಾಯಿ ಹಾಗೂ ತಾಲ್ಲೂಕಿಗೆ ಒಳ್ಳೆಯ ಹೆಸರು ತನ್ನಿ ಎಂದು ಶಾಸಕರಾದ ಲತಾ ಕಿವಿ ಮಾತು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಗೆ ಎರಡು ಹಾಸ್ಟೆಲ್‍ಗಳು ಮಂಜೂರಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಆರಂಭಿಸುವಂತೆ ಇಲಾಖೆಯಿಂದ ಆದೇಶ ಇತ್ತು, ಆದರೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಪಟ್ಟು ಹಿಡಿದು ಹರಪನಹಳ್ಳಿ ತಾಲ್ಲೂಕಿಗೆ ಒಂದು ಹಾಸ್ಟೆಲ್ ಮಂಜೂರು ಮಾಡಿಸಿದ್ದು, ಇದು ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಭೀಮಪ್ಪ, ವಸತಿ ನಿಲಯದ ಮೇಲ್ವಿಚಾರಕರಾದ ಬಿ.ಎಚ್.ಚಂದ್ರಪ್ಪ, ವೀರಣ್ಣ, ಜುಂಜಪ್ಪ, ಪ್ರೇಮಾವತಿ, ಶೃತಿ, ಅನ್ನಪೂರ್ಣ, ಮತ್ತೂರು ಬಸವರಾಜ, ಸಿದ್ದೇಶ, ಹರಿಕೃಷ್ಣ, ಸೇರಿದಂತೆ ಇತರರು ಇದ್ದರು.