ನಾವು ಕನ್ನಡಮುಖಿಗಳಾಗಬೇಕು

ನಾವು ಕನ್ನಡಮುಖಿಗಳಾಗಬೇಕು

ದಾಗಿನಕಟ್ಟೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಂ.ಆರ್.ಲೋಕೇಶ್ವರಯ್ಯ

ಚನ್ನಗಿರಿ, ನ.6- ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡ ಬೇಕು. ನಾವು  ಸಂವಹನಕ್ಕಾಗಿ ಬಳಸಲ್ಪಡುವ ಭಾಷೆ ಮೊದಲು ಕನ್ನಡವಾಗಿ, ನಂತರ ಇತರೆ ಭಾಷೆಯಾಗಿರ ಬೇಕು. ಆ ಮೂಲಕ ನಾವು ಕನ್ನಡಮುಖಿಗಳಾಗಬೇಕು ಎಂದು ಜಿ.ಕೆ.ಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಆರ್.ಲೋಕೇಶ್ವರಯ್ಯ ತಿಳಿಸಿದರು.

ಚನ್ನಗಿರಿ ತಾ. ದಾಗಿನಕಟ್ಟೆಯ ವಾಲ್ಮೀಕಿ ಪ್ರೌಢಶಾಲೆ ಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ `ಶಾಲಾ ಅಂಗಳದಲ್ಲಿ ನುಡಿ ತೋರಣ’ ಕಾರ್ಯಕ್ರಮದಲ್ಲಿ `ಕನ್ನಡ ನಾಡು-ನುಡಿ’ ವಿಷಯ ಕುರಿತು ಅವರು ಮಾತನಾಡಿದರು. 

ಕನ್ನಡದಲ್ಲಿ ಲಭ್ಯವಿರದ್ದನ್ನು ಲಭ್ಯವಾಗುವ ಹಾಗೆ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯಗಳು ರೂಪುಗೊಳ್ಳಬೇಕು. ಇದಕ್ಕಾಗಿ ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ ಬಳಕೆಯ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮೊದಲ ಆದ್ಯತೆಯಾಗಿ ನಿರ್ವಹಿಸಬೇಕಾಗಿದೆ ಎಂದರು.

ವಾಲ್ಮೀಕಿ ವಿದ್ಯಾಸಂಸ್ಥೆಯ ಖಜಾಂಚಿ ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಹೆಚ್.ಎಸ್. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ. ಅಮಿತ್, ಡಿ.ಆರ್. ರಾಮಚಂದ್ರಪ್ಪ, ದೈಹಿಕ ಶಿಕ್ಷಕ ಸಂತೋಷ್ ಮತ್ತಿತರರು ಇದ್ದರು.

error: Content is protected !!