ನಮ್ಮಲ್ಲಿ ದೊಡ್ಡ ಹಬ್ಬಗಳ ಹಿಂದೆ ಮುಂದೆ ಗ್ರಾಮೀಣ ಕ್ರೀಡೆಗಳಿಗೂ ಜೀವ ಬರುವುದು ಪ್ರಾಚೀನ ಕಾಲದಿಂದಲೂ ರೂಢಿ. ದುಂಡಿ ಎತ್ತುವುದು, ಪಲ್ಲದ ಮೂಟೆ ಹೊರುವುದು, ಎತ್ತಿನಗಾಡಿ ಓಡಿಸುವುದು, ಹೋರಿ ಹಿಡಿಯುವುದು ಮುಂತಾದವುಗಳ ಸಾಲಿನಲ್ಲಿ ನಿಂಬೆಹಣ್ಣು ಎಸೆಯುವ ಸ್ಪರ್ಧೆಯೂ ಸೇರಿದ್ದು, ಹಳೆಯ ದಾವಣಗೆರೆಯಲ್ಲಿ ದೀಪಾವಳಿಯ ನಂತರದ ದಿನಗಳಲ್ಲಿ ಕೆಲವರು ಇದನ್ನೂ ನಡೆಸುತ್ತಿದ್ದರು.
ನಿಗದಿತ ದೂರವನ್ನು ಎಷ್ಟು ಎಸೆತಗಳಲ್ಲಿ ನಿಂಬೆ ಹಣ್ಣು ಮುಟ್ಟುತ್ತದೆ ಎನ್ನುವುದರ ಮೇಲೆ ಕೆಲವರು ದುಡ್ಡಿನ ಬಾಜಿಯನ್ನೂ ಸಹಾ ಕಟ್ಟುತ್ತಿದ್ದರು. ಅತಿ ದೂರದ ಎಸೆತಗಳೆಂದರೆ ಹಳೆ ಊರಿನ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಿಂದ ಆರಂಭವಾಗಿ ರೈಲ್ವೆ ಹಳಿ ಆಚೆಗಿನ ಲಿಂಗೇಶ್ವರ ದೇವಸ್ಥಾನದವರೆಗೂ ಎಸೆತಗಳು ನಡೆದದ್ದು ಉಂಟು. ಕಡಿಮೆ ದೂರದ್ದಾದರೆ ಒಬ್ಬನೇ ಎರಡು ಅಥವಾ ಮೂರು ಎಸೆತಗಳಲ್ಲಿ ನಿಂಬೆಹಣ್ಣು ಮುಟ್ಟಿಸುವುದು, ಹೆಚ್ಚು ದೂರವಾದರೆ ಇಬ್ಬರು ಅಥವಾ ಮೂವರು ಒಬ್ಬರ ನಂತರ ಒಬ್ಬರಂತೆ ನಿಗದಿತ ಸ್ಥಳವನ್ನು ಮುಟ್ಟಿಸುವುದು, ಬಾಜಿ ಕಟ್ಟಿದವರು ಅದನ್ನು ನೋಡುತ್ತಾ ಸಾಗುತ್ತಿದ್ದರೆ ಉಳಿದವರು ಜೊತೆಯಲ್ಲೇ ಹೋಗುತ್ತಾ ಇದಕ್ಕೆ ಸಾಕ್ಷಿಯಾಗುತ್ತಿದ್ದರು.
ಒಮ್ಮೆ ದೀಪಾವಳಿಯ ಮರುದಿನ ಹಳೆ ಊರಿನ ದೊಡ್ಡಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಚೌಕಿಪೇಟೆಯನ್ನು ದಾಟಿ ಹಾಸಬಾವಿ ವೃತ್ತದವರೆಗೆ ನಾಲ್ಕು ಎಸೆತಗಳಲ್ಲಿ ನಿಂಬೆಹಣ್ಣು ಮುಟ್ಟಿಸುವುದೆಂದು ಬಾಜಿ ಕಟ್ಟಲಾಯಿತು. ಮೊದಲನೆಯ ಎಸೆತದಲ್ಲಿ ನಿಂಬೆಹಣ್ಣು ದೊಡ್ಡಪೇಟೆಯ ಮುನಿಸಿಪಲ್ ಆಸ್ಪತ್ರೆಯನ್ನು ದಾಟಿ ಗಿರಿ ಮಲ್ಲೇಶ್ವರ ದೇವಸ್ಥಾನದವರೆಗೂ ಹೋಯಿತು. ಅಲ್ಲಿಂದ ಎರಡನೇ ಎಸೆತದಲ್ಲಿ ನ್ಯಾಷನಲ್ ಪ್ರಿಂಟಿಂಗ್ ಪ್ರೆಸ್, ಅಮರಾವತಿ ಹಾಲಪ್ಪರ ಅಂಗಡಿ ದಾಟಿ ಚೌಕಿಪೇಟೆ ಕಾಳಿಕಾದೇವಿ ರಸ್ತೆ ಮೂಲೆಯ ಶಂಕರ್ ಲಾಲ್ ಅಂಗಡಿಯ ವರೆಗೂ ಬಂದಿತು. ಅಲ್ಲಿಂದ ಮೂರನೇ ಎಸೆತದಲ್ಲಿ ನಿಂಬೆಹಣ್ಣು ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನ, ಬೇವಿನ ಮರ, ಮಾಗನೂರು ಬಸಪ್ಪರ ಮನೆ ದಾಟಿ ಮಾಗಾನಹಳ್ಳಿ ಬಸಪ್ಪನವರ ಮನೆಯವರೆಗೂ ತಲುಪಿತು. ಅಲ್ಲಿಂದ ಕೊನೆಯ ಅಂದರೆ ನಾಲ್ಕನೇ ಎಸೆತ, ನಿಂಬೆಹಣ್ಣು ಗಜಾನನ ಸ್ಟೋರ್ ಅನ್ನು ದಾಟಿ ನಿಗದಿತ ಗುರಿಯಾಗಿದ್ದ ಹಾಸಬಾವಿ ವೃತ್ತವನ್ನು ಮುಟ್ಟಿದೆ ಎಂದು ಎಸೆದವ, ಬಾಜಿ ಕಟ್ಟಿದವರು ಹಾಗೂ ಉಳಿದವರು ಆಕಡೆ ಓಡಿದರು.
ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು ಹಾಗೂ ನೆನಪುಗಳು
ಮಹಾರಾಜ ಪೇಟೆ ಕಡೆಯ ತುಕಾರಾಮ ಉರ್ಫ್ ತುಕ್ಕಪ್ಪ ತುಸು ಹಾಸ್ಯ ಪ್ರವೃತ್ತಿಯ ಕೀಟಲೆ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿತ್ತು. ಅನೇಕ ಬಾರಿ ತನ್ನ ಕೀಟಲೆ ಕಿತಾಪತಿಯಿಂದ ಹಿಗ್ಗಾಮುಗ್ಗ ಬೈಸಿಕೊಂಡರೂ ತುಕ್ಕಪ್ಪ ಬೇಸರಗೊಳ್ಳದೇ ನಕ್ಕು ತನ್ನ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದ. ಅಂದು ಹಾಸಬಾವಿ ವೃತ್ತದ ಆಚೆಗಿರುವ ಲಾಯರ್ ಚನ್ನಪ್ಪನವರ ಮನೆಯ ಬಳಿ ರಸ್ತೆಯಲ್ಲಿ ಚಿಗಟೇರಿ ಸಂಗಪ್ಪರ ಮಗ ಜಯಣ್ಣರ ಸೋಡಾ ಗಾಡಿ ಬಳಿ ತುಕಾ ರಾಮಪ್ಪ ಹತ್ತು ಪೈಸೆಯ ನಿಂಬು ಸೋಡಾಕ್ಕಾಗಿ ನಿಂತಿದ್ದ. ಈ ಕಡೆಯಿಂದ ಎಸೆದ ನಿಂಬೆಹಣ್ಣು ನಿಗದಿತ ಗುರಿ ಹಾಸಬಾವಿ ವೃತ್ತವನ್ನು ದಾಟಿ ತುಸು ಮುಂದಿದ್ದ ಸೋಡಾ ಗಾಡಿಯ ಬಳಿ ಹೋಯಿತು. ಕಾಲ ಬಳಿ ಬಂದ ನಿಂಬೆಹಣ್ಣನ್ನು ನೋಡಿ ಕೈಗೆತ್ತಿಕೊಂಡ ತುಕ್ಕಪ್ಪ `ಹತ್ತು ಪೈಸದ ನಿಂಬು ಸೋಡಕ್ಕೆ ನಿಂಬಿ ಹಣ್ಣು ನಾ ಕೊಡ್ತೀನಿ, ಮೂರು ಪೈಸೆ ಬಿಟ್ಟು ಏಳು ಪೈಸೆ ಅಷ್ಟೇ ತಗೋ’ ಎಂದು ಜಯಣ್ಣಗೆ ನಿಂಬೆಹಣ್ಣು ಕೊಟ್ಟ. ಜಯಣ್ಣ ಅದನ್ನು ಕತ್ತರಿಸಿ, ಸೋಡಕ್ಕೆ ಹಾಕಿ ಕೊಟ್ಟ, ತುಕ್ಕಪ್ಪ ಕುಡಿದೇ ಬಿಟ್ಟ.
ಈ ಕಡೆಯಿಂದ ಓಡುತ್ತಾ ಹೋದವರು ಹಾಸಬಾವಿ ವೃತ್ತದ ಸುತ್ತೆಲ್ಲಾ ನಿಂಬೆ ಹಣ್ಣಿಗಾಗಿ ಹುಡುಕಾಡಿದರು. ಅಲ್ಲಿದ್ದವರನ್ನು ಕೇಳಿದರು. `ಅಲ್ಲೇ ಮುಂದೆ ಸೋಡಾ ಗಾಡಿ ಮಟ ಬಂದಂಗಾತು, ಎಲ್ಲೋತೋ ಕಾಣಿಸಲಿಲ್ಲ’ ಎಂದರು. ತುಕಾರಾಮ ನಗುತ್ತಾ ನಿಂತಿದ್ದ!. ಅವನನ್ನು ಕೇಳಿದರು. `ಹೌದು ಬಂತು, ಸೋಡಾ ಸೇರ್ಕಂಡು ನನ್ ಹೊಟ್ಟಿಗೂ ಹೋತು’ ಎಂದ. ಸಿಟ್ಟಾದ ಇವರು ಲೇ ಪುಣ್ಯಾತ್ಮ ನಿನಗೆ ಅದೇ ಬೇಕಾಗಿತ್ತೇನಲೇ’ ಎಂದು ರೇಗಿದರು. `ಕಾಲು ಹತ್ರ ಬಂತು, ಪರಮಾತ್ಮ ಕೊಟ್ಟಿದ್ದು ಅಂತ ಸೋಡಾಕ್ಕೆ ಹಾಕ್ಸಿ ಕುಡದೆ’ ಎಂದ ನಗುತ್ತಲೇ ತುಕಾರಾಮ. `ಆತಲ್ಲ ಸಿಪ್ಪಿಯಾರಾ ಎಲ್ಲೈತಿ ತೋರ್ಸು’ ಎಂದರು. ತುಕ್ಕಪ್ಪ ಜಯಣ್ಣನ ಕಡೆ ನೋಡಿದ. ಜಯಣ್ಣ ನಿಂಬೆಹಣ್ಣು ಹಿಂಡುವ ಮರದ ಇಕ್ಕಳದಿಂದ ಕೆಳಗೆ ಬಿದ್ದಿದ್ದ ಸಿಪ್ಪೆ ಎತ್ತಿ ತೋರಿಸಿದ. ಆಮೂಲಾಗ್ರವಾಗಿ ಪರೀಕ್ಷಿಸಿದ ಬಾಜಿದಾರರು ಇದು ಅದೇ ನಿಂಬೆಹಣ್ಣು ಎಂದು ತೀರ್ಮಾನಿಸಿ, ಗೆಲುವನ್ನು ಘೋಷಿಸಿಕೊಂಡರು. ಇದನ್ನೆಲ್ಲಾ ನಾನು ನೋಡಿರಲಿಲ್ಲ. ಆದರೆ, ಅಲ್ಲಿ ಪ್ರತ್ಯಕ್ಷ ಕಂಡವರೇ ನನಗೆ ಹೇಳಿದ್ದು.
ಆತ್ಮೀಯ ಓದುಗರೇ ದೀಪಾವಳಿ ಸ್ವಾರಸ್ಯದ ಹಳೆ ಘಟನೆಗಳು ಬರೆದಷ್ಟೂ ಇವೆ. ಬಿಡುವಾದಾಗ ಬೇರೆ ಸ್ವಾರಸ್ಯಗಳನ್ನು ಬರೆಯುವೆ.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ