ಎಂ.ಪಿ.ರವೀಂದ್ರರ 6ನೇ ಪುಣ್ಯಸ್ಮರಣೆಯಲ್ಲಿ ಶಾಸಕರಾದ ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ,ನ.4- ಶೈಕ್ಷಣಿಕವಾಗಿ ಮುಂದು ವರೆದಿರುವ ತಾಲ್ಲೂಕಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆ ಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ಹರಪನಹಳ್ಳಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಜೊತೆಗೆ, ತಾಲ್ಲೂಕಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ಸೆಂಟರ್ ತೆರೆಯುವ ಪ್ರಯತ್ನವನ್ನೂ ಮಾಡುತ್ತೇನೆ ಎಂದು ಅವರು ತಿಳಿಸಿದರು.
ತಾಲ್ಲೂಕಿನ ಜನರ ಬಹು ನಿರೀಕ್ಷಿತ ಹಾಗೂ ಸಹೋದರ ಎಂ.ಪಿ.ರವೀಂದ್ರ ಅವರ ಕನಸಿನ ಯೋಜನೆಯಾದ ಗರ್ಭಗುಡಿ ಬ್ರಿಡ್ಜ್-ಕಂ ಬ್ಯಾರೇಜ್ ಕಾಮಗಾರಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಬರುವ ಜನವರಿಯಲ್ಲಿ ಕಾಮಗಾರಿ ಮುಂದುವರೆಯಲ್ಲಿದ್ದು ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ರವೀಂದ್ರ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ. ಅವರು ಒಂದು ಶಕ್ತಿಯಾಗಿದ್ದರು, ಹಿಂದುಳಿದ ಹರಪನಹಳ್ಳಿ ತಾಲ್ಲೂಕನ್ನು 371ಜೆ ಗೆ ಸೇರಿಸುವಲ್ಲಿ ತುಂಬಾ ಕಷ್ಟಪಟ್ಟರು, 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ತಾಲ್ಲೂಕಿನ ರೈತರ ಬದು ಕನ್ನು ಹಸನಗೊಳಿಸಿದರು ಎಂದರು. ತಮ್ಮ ಅಧಿಕಾರವಧಿ ಯಲ್ಲಿ ತಳ ಸಮುದಾಯ ಗಳಿಗೆ ಸಾಮಾಜಿಕ ನ್ಯಾಯದಡಿ ಅವಕಾಶ ನೀ ಡುತ್ತಿದ್ದರು, ಅವರಲ್ಲಿ ಎಷ್ಟೇ ನೋವುಗಳಿದ್ದರೂ ಜನರಿಗೆ ಸ್ಪಂದಿ ಸುವ ಗುಣ, ಹೃದಯ ಶ್ರೀಮಂತಿಕೆ ಹೊಂದಿದ್ದರು ಎಂದು ಹೇಳಿದರು.
ಪ್ರಗತಿಪರ ಚಿಂತಕ, ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, ದಿ.ಎಂ.ಪಿ.ರವೀಂದ್ರ ಅವರು ಸಾಮೂಹಿಕ ನಾಯಕತ್ವ ಗುಣ, ಅಭಿವೃದ್ಧಿಪರ ಚಿಂತನೆ ಹೊಂದಿದ್ದರು, ಮನುಷ್ಯ ಇದ್ದಾಗಲೇ ತನ್ನ ಹೆಜ್ಜೆ ಗುರುತು ಕಳೆದುಕೊಳ್ಳುತ್ತಾನೆ. ಆದರೆ ಎಂ.ಪಿ.ರವೀಂದ್ರ, ಸತ್ತ ಮೇಲೆಯೂ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದರು.
ಚಿಗಟೇರಿ ಬ್ಲಾಕ್ ಅಧ್ಯಕ್ಷ ಕೆ.ಕುಬೇರಪ್ಪ, ಅಲಗಿಲವಾಡ ವಿಶ್ವನಾಥ, ಶಿಕ್ಷಕ ಮೇಘರಾಜ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಟಿ.ವೆಂಕಟೇಶ, ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಮುಖಂಡರಾದ ಎಚ್.ಎಂ.ಕೊಟ್ರಯ್ಯ, ವಸಂತಪ್ಪ, ಚಿಕ್ಕೇರಿ ಬಸಪ್ಪ, ಓ. ರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ಸಣ್ಣಹಾಲಪ್ಪ, ಸೈಯದ್ ಇರ್ಫಾನ್, ಮತ್ತೂರು ಬಸವರಾಜ, ಶಿವಪುತ್ರ, ನಾಗರಾಜ, ಶಿವರಾಜ, ಮುತ್ತು, ನೇತ್ರಾವತಿ ಸೇರಿದಂತೆ ಇತರರು ಇದ್ದರು.