ಹರಿಹರ, ನ.4- ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ವಕ್ಫ್ ಮಂಡಳಿಯ ಮೂಲಕ ಜನರನ್ನು ಆತಂಕದ ಸ್ಥಿತಿಗೆ ತಳ್ಳುವುದಕ್ಕೆ ಮುಂದಾಗಿದ್ದು, ಜೊತೆಗೆ ಸರ್ಕಾರಿ ಅಧೀನದಲ್ಲಿ ಇರುವ ಆಸ್ತಿಯನ್ನು ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ವತಿಯಿಂದ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೆರವಣಿಗೆಯು ಹಳೆ ಕೋರ್ಟ್ ಆವರಣದಿಂದ ಪ್ರಾರಂಭಗೊಂಡು ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತದ ಮೂಲಕ ಹಾದು ತಹಶೀಲ್ದಾರ್ ಕಚೇರಿಗೆ ಅಂತ್ಯಗೊಂಡಿತು.
ಈ ವೇಳೆ ಶಾಸಕ ಹರೀಶ್ ಮಾತನಾಡಿ, ರಾಜ್ಯದ ವಿಜಯಪುರ ಜಿಲ್ಲೆ ಸೇರಿದಂತೆ, ರಾಜ್ಯದ ಹಲವು ನಗರಗಳಲ್ಲಿ 1500 ಎಕರೆ ಜಮೀನನ್ನು ವಕ್ಫ್ ಆಸ್ತಿಯೆಂದು ಘೊಷಿಸಿ ತಹಶೀಲ್ದಾರ್ ರವರಿಂದ ಪುಷ್ಟೀಕರಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರು ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್‌ಗೆ ಸೇರಿದ್ದು ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡುವುದಕ್ಕೆ ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 1649 ಆಸ್ತಿಗಳ ಹಕ್ಕಿಗಾಗಿ ವಕ್ಪ್ ಗೆ ಪ್ರತಿಪಾದಿಸುತ್ತಿದೆ. ಅದೇ ರೀತಿ ರಾಜ್ಯದ ಸವಣೂರು, ಕೊಪ್ಪಳದ ಕುಕನೂರು, ಶ್ರೀರಂಗಪಟ್ಟಣದ ಮಹದೇವಪುರ ಸೇರಿದಂತೆ ಇತರೆ ನಗರಗಳಲ್ಲಿ ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆಯುವುದಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಜಮೀರ್ ಆಹ್ಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಇದನ್ನು ಇಲ್ಲಿಗೆ ನಿಲ್ಲಿಸದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹನುಮಂತಪ್ಪ, ಬಿಜೆಪಿ ಮುಖಂಡರಾದ ಅಜಿತ್ ಸಾವಂತ್, ಐರಣಿ ಅಣ್ಣಪ್ಪ, ಹಿಂಡಸಗಟ್ಟೆ ಲಿಂಗರಾಜ್, ಬಾತಿ ಚಂದ್ರಶೇಖರ್, ಪರಶುರಾಮ್ ಕಾಟ್ವೆ, ತುಳಜಪ್ಪ ಭೂತೆ, ಹೆಚ್. ಮಂಜಾನಾಯ್ಕ್, ಸಂತೋಷ ಗುಡಿಮನಿ, ರಾಜು ರೋಖಡೆ, ಮಹಾಂತೇಶ್ ಆದಾಪುರ, ಗಿರೀಶ್ ಗೌಡ, ಅದ್ವೈತ ಶಾಸ್ತಿ, ನವೀನ್, ವಿರುಪಾಕ್ಷಪ್ಪ, ಸುನಿಲ್, ಆದರ್ಶ, ದಿನೇಶ್, ರವಿ ರಾಯ್ಕರ್, ರವಿಕುಮಾರ್, ಮಂಜುನಾಥ್, ಸಾಕ್ಷಿ, ರೂಪಾ ಕಾಟ್ವೆ, ರೂಪಾ, ಸುಧಾ, ಸೊಳಂಕಿ ಹಾಗೂ ಇತರರು ಹಾಜರಿದ್ದರು.