ಚನ್ನಗಿರಿ, ಅ.4- ಕನ್ನಡ ಭಾಷೆಯು ಕೇವಲ ಆಡಳಿತ ಭಾಷೆಯಾಗಿದ್ದರೆ ಸಾಲದು, ತಾಯ್ನುಡಿಯ ಪಾವಿತ್ರ್ಯತೆ ಯೊಂದಿಗೆ ಪ್ರತಿಯೊಬ್ಬ ಕನ್ನಡಿಗನ ಹೃದಯದ ಭಾಷೆ ಆಗಬೇಕು ಎಂದು ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಸಂಯುಕ್ತ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಚನ್ನಗಿರಿ ಕನ್ನಡ ಭಾಷಾ ಬಳಗದ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ `ಶಾಲಾ ಅಂಗಳದಲ್ಲಿ ನುಡಿ ತೋರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನವೆಂಬರ್ ಮಾಸದ ರಾಜ್ಯೋತ್ಸವ ಆಚರಣೆಯು ಕೇವಲ ಸಾಂಕೇತಿಕ. ವರ್ಷವಿಡೀ ನಮ್ಮ ಹೃದಯ ಸಿಂಹಾಸನದಲ್ಲಿ ಕನ್ನಡ ರಾಜರಾಜೇಶ್ವರಿಯನ್ನು ಆರಾಧಿಸಲ್ಪಡಬೇಕು ಎಂದರು.
ಉಪನ್ಯಾಸಕ ಹೆಚ್.ಎಂ.ಬಸವರಾಜಪ್ಪ `ಭಾರಿಸು ಕನ್ನಡ ಡಿಂಡಿಮವ’ ವಿಷಯದ ಕುರಿತು ಮಾತನಾಡಿ, ಕನ್ನಡ ನೆಲದ ಕಲೆ, ಸಾಹಿತ್ಯ, ಸಂಗೀತ, ನಾಟಕಗಳ ಪ್ರಭಾವ ಬಹಳ ಮಹತ್ವದ್ದು. ಯಾವುದೇ ನಾಡಿನ ವಿಕಾಸವು ಆ ಭಾಷೆಯ ಸಾಹಿತ್ಯ, ಸಂಸ್ಕೃತಿ, ಕಲಾ ಶ್ರೀಮಂತಿಕೆಯ ಮೇಲೆ ನಿಂತಿದೆ.
ಕನ್ನಡ ಭಾಷೆಯ ಸಿರಿವಂತಿಕೆಗೆ ಸಾಹಿತ್ಯ, ಕಲೆ, ಸಂಗೀತ, ನಾಟಕಗಳ ಕೊಡುಗೆ ಅಪಾರವಾದದ್ದು. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಸಮೃದ್ಧ ಶ್ರೀಮಂತವಾದ ಭಾಷೆ ನಮ್ಮ ಕನ್ನಡ ಎಂದು ಅಭಿಮತ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕಾಧ್ಯಕ್ಷ ಎಲ್.ಜಿ.ಮಧುಕುಮಾರ್ ಮಾತನಾಡಿ, ಶಾಲಾ ಅಂಗಳದಲ್ಲಿ ನುಡಿ ತೋರಣ ಕಾರ್ಯಕ್ರಮದ ಔಚಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ತಿಳಿಸಿದರು.
ಉಪ ಪ್ರಾಚಾರ್ಯ ಲೋಹಿತಾಶ್ವ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಪದಾಧಿಕಾರಿಗಳಾದ ಜಿ.ಚಿನ್ನಸ್ವಾಮಿ, ಪಿ.ಓಂಕಾರಮೂರ್ತಿ, ಕನ್ನಡ ಶಿಕ್ಷಕ ನಾಗೇಶನಾಯ್ಕ್, ಸಿದ್ದೇಶ್, ತಿಪ್ಪೇಶಪ್ಪ ಮತ್ತಿತರರು ಇದ್ದರು.