ಜಿಲ್ಲಾ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ 40ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಗಣ್ಯರ ಶ್ಲ್ಯಾಘನೆ
ದಾವಣಗೆರೆ, ನ. 5- ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಶಾಮನೂರು ಶಿವಶಂಕರಪ್ಪ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆ ಮಹಾಪೌರ ಕೆ.ಚಮನ್‍ಸಾಬ್ ಅವರು ಮಾತನಾಡಿ, ಪಾಕಿಸ್ತಾನದ ಅಟ್ಟಹಾಸವನ್ನು ಸಮರ್ಥವಾಗಿ ಎದುರಿಸಿದ ದಿಟ್ಟ ಮಹಿಳೆ ಆಗಿದ್ದ ಇಂದಿರಾಗಾಂಧಿ ಅವರು, ಪೂರ್ವ ಪಾಕಿಸ್ತಾನದ ನಾಗರಿಕರ ವಿರುದ್ಧ ಪಾಕಿಸ್ತಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತು. ಸುಮಾರು 10 ದಶಲಕ್ಷ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಸಿ ಆರ್ಥಿಕ ಮುಗ್ಗಟ್ಟು ಎದುರಾದ ಹಿನ್ನೆಲೆಯಲ್ಲಿ ಆಗ 1971ರ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದು ಬಾಂಗ್ಲಾ ದೇಶ ಹುಟ್ಟಿಹಾಕಿದರು ಎಂದರು.
ಇಂದಿರಾಗಾಂಧಿ ಅವರು ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 70 ಸಾವಿರ ಸೈನಿಕರನ್ನು ಬಂಧಿಸಿದ್ದರು. ಆದರೆ ಈಗಿನ ಪ್ರಧಾನಿ ಮೋದಿ ಅವರು ಕಳೆದ 5 ವರ್ಷಗಳ ಹಿಂದೆ ಪುಲ್ವಾಮದಲ್ಲಿ ದೇಶದ ಸೈನಿಕರನ್ನು ಬಲಿ ತೆಗೆದುಕೊಂಡು ಪಾಕಿಸ್ತಾನದ ಖಾಲಿ ಜಾಗದಲ್ಲಿ ಬಾಂಬ್ ಹಾಕಿಸಿದರೆ ವಿನಃ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಪಾಕಿಸ್ತಾನವನ್ನು ದ್ವೇಷಿಸುತ್ತಿದ್ದಾರೆ ಎಂದು ದೂರಿದರು.
ಇಂದಿರಾಗಾಂಧಿ ಅವರ ದಿಟ್ಟತನ ನೋಡಿದ ಅಂದಿನ ವಿರೋಧ ಪಕ್ಷದ ನಾಯಕ ವಾಜಪೇಯಿ ಅವರೇ ಇಂದಿರಾಗಾಂಧಿ ಅವರನ್ನು ಹಾಡಿ ಹೊಗಳಿದರು. ಅವರ ನಿಧನದಿಂದ ದೇಶದಲ್ಲಿ ಅಲ್ಲೋಲ ಕಲ್ಲೊಲ ಆಗಿ ಕೋಟ್ಯಾಂತರ ಬಡವರು ಕಣ್ಣೀರು ಹಾಕಿದರು ಎಂದರು.
ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಮಾತನಾಡಿ, ಶೋಷಿತರು, ಬಡವರ ಬಗ್ಗೆ ಕಾಳಜಿ ಹೊಂದಿದ್ದ ಇಂದಿರಾಗಾಂಧಿ ಅವರು ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದ್ದಲ್ಲದೇ ರಾಜಧನವನ್ನು ರದ್ದುಪಡಿಸಿದರು. ಅವರ ಆಡಳಿತ ಸುವರ್ಣ ಆಡಳಿತ ಕಾಲ ಎಂದು ನೆನಪಿಸಿಕೊಂಡರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಇಂದಿರಾಗಾಂಧಿ ಅವರು ರೂಪಿಸಿದ ಎಲ್ಲಾ ಯೋಜನೆಗಳು ಬಡವರ ಪರವಾಗಿದ್ದವು. ಇಂದಿರಾಗಾಂಧಿ ಅವರು ಭಾರತ ದೇಶದ ಸ್ತ್ರೀ ಸಂಕೇತವಾಗಿದ್ದಾರೆ ಎಂದರು.
ಸತ್ಯಾಗ್ರಹಗಳಿಂದ ಮಹಾನಾಯಕ ಎಂದು ಗುಜರಾತಿನಲ್ಲಿ ಜನಮನ್ನಣೆ ಪಡೆದು, ಭಾರತ ದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆ ಯನ್ನು ಗಳಿಸಿದ ಪಟೇಲರು, ಅಸ್ಪ್ರ್ಯಶ್ಯತೆ, ಮದ್ಯ ಪಾನ, ಬಡತನ ಹಾಗೂ ಅಜ್ಞಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು ಎಂದರು.
ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಪಾಕಿಸ್ತಾನ ಮತ್ತು ಚೀನಾದ ವಿರುದ್ಧದ ಯುದ್ಧ ನಡೆಸಿ ಯಶಸ್ವಿಯಾದ ಇಂದಿರಾಗಾಂಧಿ ಅವರು, ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಮಹಾಪೌರರಾದ ಸೋಗಿ ಶಾಂತಕುಮಾರ್ ಮಾತನಾಡಿ, ಭಾರತ ದೇಶ ಕಟ್ಟಲು ಜವಾಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರ ಕೊಡುಗೆ ಮಹತ್ವಾದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶ್ರೀಮತಿ ಸುಧಾ ಇಟ್ಟಿಗುಡಿ ಮಂಜು ನಾಥ್, ಎ. ನಾಗರಾಜ್, ಹನುಮಂತರಾಜ್, ಮಹಿಳಾ ಕಾಂಗ್ರೆಸ್‍ನ ರಾಜೇಶ್ವರಿ, ಮಂಗಳಮ್ಮ, ಜವಾಹರ್ ಲಾಲ್ ಮಂಚ್‍ನ ರಾಜ್ಯಾಧ್ಯಕ್ಷ ಮೈನುದ್ದೀನ್, ದೇವರಹಟ್ಟಿ ಸಮೀವುಲ್ಲಾ, ವಕೀಲರಾದ ಪರಮೇಶ್, ರಾಕೇಶ್, ಇಟ್ಟಿಗುಡಿ ಮಂಜುನಾಥ್, ಕೊಡಪಾನ ದಾದಾಪೀರ್, ಮೊಟ್ಟೆ ದಾದಾಪೀರ್, ಬಾತಿ ಶಿವಕುಮಾರ್, ಮಾರುತಿ, ಬಡೇಸಾಬ್, ಯುವರಾಜ್ ಮತ್ತಿತರರಿದ್ದರು.