ಯಲವಟ್ಟಿ ಗುರುಸಿದ್ದಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ
ಮಲೇಬೆನ್ನೂರು, ನ.5- ಯಜ್ಞ, ದಾನ, ತಪ ಕರ್ಮಗಳು ಮನುಕುಲವನ್ನು ರಕ್ಷಿಸುತ್ತವೆ. ಸತತ ಪ್ರಯತ್ನವೇ ಯಜ್ಞ, ಹಣದ ದಾನವೇ ಆಗಬೇಕಿಂದಿಲ್ಲ ಸಮಾಧಾನವು ದಾನವೇ. ಪ್ರಾಮಾಣಿಕವಾಗಿ ಮಾಡುವ ದಾನವೇ ತಪಕರ್ಮ ಎಂದು ಯಲವಟ್ಟಿ ಗುರುಸಿದ್ದಾ ಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ದಾಶ್ರಮದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಸತ್ಸಂಗ ದಂತಹ ಕಾರ್ಯಕ್ರಮದಲ್ಲಿ ಬದುಕಿನ ಅರಿವು ಮತ್ತು ಭ್ರಾತೃತ್ವದ, ಮಾತೃತ್ವದ, ಸಾಮರಸ್ಯದ ಅರಿವನ್ನು ಅರಿಯಲು ಸಾಧ್ಯ ಎಂದರು.
ಪ್ರವಚನಕಾರ ಹೊಳೆಸಿರಿಗೆರೆಯ ಸಿದ್ದೇಶ್ ಮಾತನಾಡಿ, ಲೋಕದೊಳಗೆ ಎಲ್ಲರೂ ಸುಖವನ್ನೇ ಬಯಸುತ್ತೇವೆ. ಅದರೊಳಗೆ ದುಃಖವೂ ಇರುತ್ತದೆ. ಅದನ್ನೂ ಸ್ವೀಕರಿಸುವ ಗುಣವಿರಬೇಕು. ಸುಖ ಅಂತರಂಗದ ಕ್ರಿಯೆಯಾಗಿದೆ. ಮನ ಶುದ್ಧತೆಗೆ ಸತ್ಸಂಗವೇ ಪ್ರಧಾನ. ನಿಮ್ಮೊಳಗೆ ಭಗವಂತನಿದ್ದಾನೆ ಮನ ಶುದ್ದವಾದಲ್ಲಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದು ತಿಳಿಸಿದರು.
ವೈದ್ಯ ಜಿಗಳಿಯ ಡಾ. ಎನ್.ಆರ್.ದಿನೇಶ್ ಕುಮಾರ್ ಮತ್ತು ಕುಂದೂರು ಮಂಜಪ್ಪ ಮಾತನಾಡಿದರು. ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಎಂ. ಈಶ್ವರಪ್ಪ, ಹೊಸಮನಿ ಮಲ್ಲಪ್ಪ, ಡಿ.ಜಿ.ನಾಗರಾಜಪ್ಪ, ನಿವೃತ್ತ ಶಿಕ್ಷಕ ಹೆಚ್.ಎನ್.ತಿಪ್ಪೇಶ್, ಮಾಗೋಡು ಸಿದ್ದಪ್ಪ, ವೈ.ಜಿ.ನಾಗರಾಜ್, ನಿವೃತ್ತ ಯೋಧ ಶಿವಕುಮಾರ್, ಬಾವಿಕಟ್ಟಿ ಮಲ್ಲೇಶಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಕುಂಬಳೂರು ಕುಬೇರಪ್ಪ ಭಕ್ತಿಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ನಂತರ ಶ್ರೀಗಳ ಕಿರೀಟ ಧಾರಣೆ ಪೂಜೆ ನಡೆಯಿತು. ಯಲವಟ್ಟಿಯ ಪಾರ್ವತಮ್ಮ ಕೋಂ ದಿ. ಮಹೇಶ್ವರಯ್ಯ ಮತ್ತು ಮಕ್ಕಳು ಈ ದಿನದ ದಾಸೋಹಿಗಳಾಗಿದ್ದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.