ಮನುಷ್ಯನ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಅಸ್ತ್ರ

ಮನುಷ್ಯನ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಅಸ್ತ್ರ

ಅರಸಿಕೇರಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಕೋಲಶಾಂತೇಶ್ವರ ಶ್ರೀ

ಹರಪನಹಳ್ಳಿ, ನ. 5- ಮನುಷ್ಯನ  ಸರ್ವಾಂ ಗೀಣ ಅಭಿವೃದ್ದಿಗೆ ಶಿಕ್ಷಣ  ಪ್ರಮುಖ ಅಸ್ತ್ರವಾಗಿದೆ  ಎಂದು ಅರಸಿಕೇರಿ ಕೋಲಶಾಂತೇಶ್ವರ  ವಿರಕ್ತ ಮಠದ ಶ್ರೀ ಕೋಲಶಾಂತೇಶ್ವರ ದೇಶೀಕೇಂದ್ರ  ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅರಸಿಕೇರಿಯಲ್ಲಿ  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಾನವ ಶಾಸ್ತ್ರ ವಿಭಾಗ ಹಾಗೂ ವೈ.ಅಣ್ಣಪ್ಪ ಪದವಿ ಮಹಾವಿದ್ಯಾಲಯ ಅರಸಿಕೇರಿ ಇವರ ಸಹಯೋಗದಲ್ಲಿ ಆಯೋಜಿಸ ಲಾಗಿದ್ದ `ಕಲ್ಯಾಣ ಕರ್ನಾಟಕದ ಹಿಂದುಳಿದ ವರ್ಗಗಳ ಸಮಸ್ಯೆ ಮತ್ತು ಸವಾಲುಗಳು’  ಎಂಬ ವಿಷಯ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿ ರಣದ  ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಕಲ್ಪ ಅಗತ್ಯ. ಮೌಲ್ಯಯುತ ಉತ್ತಮ ಶಿಕ್ಷಣದೊಂದಿಗೆ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಬೇಕು. ಆದರೆ ಸರ್ಕಾರದ ಕೆಲ ಯೋಜನೆಗಳಿಂದ ಇಂದು  ರೈತರು ಶ್ರಮಿಕರಾಗದೇ ಸೋಮಾರಿಗಳಾಗಿದ್ದಾರೆ   ಎಂದರು.

ಹಂಪಿಯ ಕನ್ನಡ ವಿಶ್ವ ವಿಶ್ವವಿದ್ಯಾಲಯದ ಕುಲಪತಿ  ಡಾ.ಪರಮಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿದೆ. ಅಧಿಕಾರಿಗಳು ಅರ್ಹರನ್ನು ಗುರುತಿಸಿ ಯೋಜನೆ ತಲುಪಿಸಬೇಕು. ಜೊತೆಗೆ ಸಾರ್ವಜನಿಕರು ಎಚ್ಚೆತ್ತು ಸದ್ಬಳಕೆ ಮಾಡಿಕೊಳ್ಳ ಬೇಕು. ಮೈಸೂರು ಭಾಗದ ಅಭಿವೃದ್ಧಿಗೆ ಶೈಕ್ಷಣಿಕ ಪ್ರಗತಿ ಪ್ರಮುಖ ಕಾರಣವಾಗಿದೆ ಎಂದರು.

ಅಕ್ಷರ ಸೀಡ್ಸ್, ಮಾಲೀಕ  ಎನ್.ಕೊಟ್ರೇಶ ಮಾತನಾಡಿ, ವಿಚಾರ ಸಂಕಿರಣಗಳು ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಅಗತ್ಯವಿದೆ. ರಾಷ್ಟ್ರಮಟ್ಟದ ಈ ಕಾರ್ಯಕ್ರಮಕ್ಕೆ ಶಾಸಕರು, ಸಂಸದರು ಭಾಗಿಯಾಗದಿರುವುದು ವಿಪರ್ಯಾಸ. ಕಲ್ಯಾಣ ಕರ್ನಾಟಕದ ಪ್ರದೇಶಗಳಿಗಾಗಿ ಸರ್ಕಾರ ವಿಶೇಷ ಅನುದಾನ ನೀಡಿದರೂ ಕೂಡ ಜನಸಾಮಾನ್ಯರ ಪರಿಸ್ಥಿತಿ ಸುಧಾರಿಸಿಲ್ಲ. ಶಿಕ್ಷಣ ಹುಲಿ ಹಾಲು ಇದ್ದ ಹಾಗೆ ಶಿಕ್ಷಣವನ್ನು ಕಷ್ಟಪಟ್ಟು ಪಡೆದುಕೊಂಡರೆ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಡಾ.ಎಸ್.ಆರ್ ಕೇಶವ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ಜರುಗಬೇಕು.  ರಾಮರಾಜ್ಯದ ಕನಸು ಸರ್ಕಾರದ್ದು. ಸರ್ಕಾರ ಸಾಕಷ್ಟು ಅನುದಾನ ಹಂಚಿಕೆ ಮಾಡಿದರೂ ಹಿಂದುಳಿದ ವರ್ಗದ ಜನರ ಅಭಿವೃದ್ಧಿಯಾಗಿಲ್ಲ, ಯಾವುದೇ ಪ್ರದೇಶ ಅಭಿವೃದ್ದಿಯಾಗಬೇಕಾದರೆ ಪ್ರಮುಖವಾಗಿ ರಸ್ತೆ, ಕುಡಿಯುವ ನೀರು,  ಶಿಕ್ಷಣ ಪ್ರಮುಖವಾಗಿದೆ ಎಂದರು.

ಹಂಪಿ ಕನ್ನಡ ವಿಶ್ವ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ.ತಾರಿಹಳ್ಳಿ ಹನುಮಂತಪ್ಪ, ವೈ. ಅಣ್ಣಪ್ಪ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಸುರೇಶ,  ಪ್ರಾಧ್ಯಾಪಕ ಡಾ.ಹಾದಿಮನಿ ರಮೇಶ, ಡಾ. ಹರಾಳು ಬುಳ್ಳಪ್ಪ, ಡಾ. ಎಂ.ಭೀಮಪ್ಪ, ಶ್ರೀಧರ ಬಾರ್ಕಿ, ಪ್ರಶಾಂತ್ ಪಾಟೀಲ್, ವಿನಾಯಕ ಸೇರಿದಂತೆ ಇತರರು ಇದ್ದರು.

error: Content is protected !!