ದಾವಣಗೆರೆ, ನ. 3- ನಗರದ ಹಿರಿಯ ಪತ್ರಕರ್ತರೂ ಆದ `ಇಂದಿನ ಸುದ್ದಿ’ ಸಂಪಾದಕ ವೀರಪ್ಪ ಎಂ.ಭಾವಿ ಅವರು ನಿನ್ನೆ ತಡರಾತ್ರಿ ರಾತ್ರಿ 2.50ಕ್ಕೆ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.
ಕಳೆದ 45 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ದೈವ ಭಕ್ತರಾಗಿದ್ದ ಅವರು, ಹಲವು ಮಠ – ಪೀಠಗಳ ಆಪ್ತ ಒಡನಾಡಿಗಳಾ ಗಿದ್ದರು. ಪತ್ರಿಕೋದ್ಯಮದ ಜೊತೆ – ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಪದಾಧಿಕಾರಿಗಳಾಗಿದ್ದರು.
ಗಣ್ಯರ ಸಂತಾಪ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ವೀರಪ್ಪ ಭಾವಿ ಅವರ ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮೃತರ ನಿವಾಸಕ್ಕೆ ಆಗಮಿಸಿ, ವೀರಪ್ಪ ಭಾವಿ ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಹಿರಿಯ ಪತ್ರಕರ್ತರುಗಳಾದ ಬಿ.ಎನ್.ಮಲ್ಲೇಶ್, ಬಾ.ಮ. ಬಸವರಾಜಯ್ಯ, ಕೆ. ಚಂದ್ರಣ್ಣ ಸೇರಿದಂತೆ, ಅನೇಕ ಪತ್ರಕರ್ತರು, ಗಣ್ಯರು ಮೃತರ ನಿವಾಸಕ್ಕೆ ಭೇಟಿ ನೀಡಿ ವೀರಪ್ಪ ಭಾವಿ ಅವರ ಅಂತಿಮ ದರ್ಶನ ಪಡೆದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಅವರುಗಳು ವೀರಪ್ಪ ಭಾವಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.