ಕನ್ನಡ ನಾಡಿನ ಸೊಬಗು ವಿಶ್ವಕ್ಕೆ ಮಾದರಿ: ಕೆ.ಉಚ್ಚಂಗೆಪ್ಪ

ಕನ್ನಡ ನಾಡಿನ ಸೊಬಗು ವಿಶ್ವಕ್ಕೆ ಮಾದರಿ: ಕೆ.ಉಚ್ಚಂಗೆಪ್ಪ

ಹರಪನಹಳ್ಳಿ, ನ.3- ಕನ್ನಡ ನಾಡು ಸಂಪದ್ಭರಿತವಾದ ನಾಡು. ಇಲ್ಲಿನ ನೆಲ, ಜಲ, ನಾಡು-ನುಡಿ, ಭಾಷೆ, ಸಾಹಿತ್ಯ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನೇರವೇರಿಸಿ ಮಾತನಾಡಿದರು.

ಕನ್ನಡ ನಾಡು ನುಡಿಯನ್ನು ಗೌರವಿಸಿ ಪೋಷಿಸುವ ಕೆಲಸ ಎಲ್ಲರಿಂದಾಗಬೇಕು. ನಾಡಿನ ಬೆಟ್ಟ-ಗುಡ್ಡ, ಸಾಧು ಸಂತರು, ದಾಸರು, ಶರಣರು ಮತ್ತು ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿನ ಸಂಪತ್ತು ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಬೇಲೂರು, ಹಳೇಬೀಡು, ಹಂಪಿ, ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನ ಶಿಲ್ಪ ಕಲೆ ಹಾಗೂ ಕದಂಬರು, ಚಾಲುಕ್ಯರು, ರಾಷ್ಟಕೂಟರು ಸೇರಿದಂತೆ ಅನೇಕ ರಾಜ ಮನೆತನಗಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕೊಡುಗೆ ಈ ನಾಡಿನ ಪರಂಪರೆಯ ಸೊಬಗನ್ನು ಹೆಚ್ಚಿಸಿವೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ ಮಾತನಾಡಿ, ರಾಜ್ಯೋತ್ಸವವನ್ನು ಕೇವಲ ನವಂಬರ್ ತಿಂಗಳಿಗೆ ಸೀಮಿತ ಮಾಡದೇ ಪ್ರತಿ ದಿನವೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತಾಗಬೇಕು ಎಂದು ಹೇಳಿದರು.

ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಿದಾಗ ಪ್ರತಿ ದಿನವೂ ರಾಜ್ಯೋತ್ಸವ ಆಚರಿಸಿದಂತಾಗುತ್ತದೆ. 8 ಜ್ಞಾನ ಪೀಠ ಪ್ರಶಸ್ತಿ ಪಡೆದ ಈ ನಾಡು ಪಂಪ, ರನ್ನ, ಪೊನ್ನ, ಜನ್ನ, ಕುಮಾರವ್ಯಾಸ ಹಾಗೂ ಹರಿಹರರಂತಹ ಮಹಾಕವಿಗಳನ್ನು ನೀಡಿದೆ ಎಂದು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕಿ ಸುಭದ್ರಮ್ಮ ಮಾಡ್ಲಿಗೇರಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನ ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ ಎಂದರು.

ಈ ನಾಡು ಮನುಕುಲೋದ್ಧಾರಕ ಹೊಂಗಿರಣ ವಾದ ವಿಶ್ವಗುರು ಬಸವಣ್ಣನವರಂಥ ತತ್ವ ಚಿಂತಕ ರನ್ನು, ಕರ್ನಾಟಕ ಸಂಗೀತವನ್ನು ವಿಶ್ವಮಟ್ಟಕ್ಕೇರಿಸಿದ ಪುರಂದರದಾಸರನ್ನು, ವೈಚಾರಿಕ ಪ್ರಿಯ ಹರಿಕಾರ ರಾದ ಕನಕದಾಸರನ್ನು ಮತ್ತು ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದ ಸಿ.ಎನ್.ಆರ್ ರಾವ್‌ ಅವರನ್ನು ಕೊಡುಗೆಯಾಗಿ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಿ. ಮಹದೇವಪ್ಪ, ತಾಲ್ಲೂಕು ಮೀನುಗಾರಿಕೆ ಸಂಘದ ಅಧ್ಯಕ್ಷ ನಿಟ್ಟೂರು ತಿಮ್ಮಪ್ಪ, ಮುಖಂಡರಾದ ಮಂಜುನಾಥ, ಪಿ. ಜಗದೀಶ ಸೇರಿದಂತೆ ಇತರರು ಇದ್ದರು.

error: Content is protected !!