ಗೃಹ ಸಾಲ ನೀಡಿಕೆ ವೇಳೆ ಒತ್ತಾಯ ಪೂರ್ವಕ ವಿಮಾ ಪಾಲಿಸಿ

ಗೃಹ ಸಾಲ ನೀಡಿಕೆ ವೇಳೆ ಒತ್ತಾಯ ಪೂರ್ವಕ ವಿಮಾ ಪಾಲಿಸಿ

88 ಸಾವಿರ ರೂ.ಗಳ ಪರಿಹಾರ ನೀಡಲು ಬ್ಯಾಂಕ್ ಅಧಿಕಾರಿಗೆ ಆದೇಶ

ದಾವಣಗೆರೆ, ನ.3- ನಿಯಮ ಬಾಹಿರವಾಗಿ ಸಾಲದ ಭದ್ರತೆಗಾಗಿ ವಿಮಾ ಪಾಲಿಸಿ ನೀಡಬೇಕೆಂಬ ಅನುಚಿತ ವ್ಯಾಪಾರ ಪದ್ದತಿಯ ವಿರುದ್ದವಾಗಿ ತೀರ್ಪು ನೀಡಿ ನೊಂದ ಗ್ರಾಹಕರಿಗೆ ಒಟ್ಟು ರೂ.88,344 ಗಳನ್ನು ಬ್ಯಾಂಕ್ ಶಾಖಾಧಿಕಾರಿ ವೇತನದಿಂದ ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ ಆದೇಶಿಸಿದ್ದಾರೆ. 

ನಗರದ ಮಂಡಿಪೇಟೆ ಎಸ್‍ಬಿಐ ಶಾಖೆಯಲ್ಲಿ ನ್ಯಾಯಾಂಗ ಇಲಾಖೆ ನೌಕರ ಚಂದ್ರಶೇಖರ ಇವರು 2023 ರ ಜುಲೈ 3 ರಂದು ಗೃಹ ನಿರ್ಮಾಣಕ್ಕಾಗಿ ರೂ.45,00,000/-ಗಳ ಗೃಹಸಾಲ ಪಡೆದಿದ್ದರು. 7 ತಿಂಗಳ ನಂತರ ಇವರ ಬ್ಯಾಂಕ್ ಖಾತೆಯಿಂದ ರೂ.28,344/-ಗಳ ಹಣ ವರ್ಗಾಯಿಸಿರುವುದು ಕಂಡು ಬಂದಿರುತ್ತದೆ. ಬ್ಯಾಂಕ್‍ಗೆ ಭೇಟಿ ನೀಡಿ ವಿಚಾರಿಸಲಾಗಿ ಈಗಾಗಲೇ ಗೃಹಸಾಲ ಪಡೆಯುವಾಗ ರೂ.4,61,279/- ರೂ.ಗಳ ವಿಮಾ ಪಾಲಿಸಿಯನ್ನು ಭದ್ರತೆಗಾಗಿ ನೀಡಿದ್ದು,  ಈಗ ಹೆಚ್ಚಿನ ವಿಮಾ ಪಾಲಿಸಿ ಏಕೆ ? ಎಂದು ಪ್ರಶ್ನಿಸಿರುತ್ತಾರೆ.  ನೀವು ಒಂದು ಕೋರಿಕೆ ಪತ್ರ ನೀಡಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆಂದು ಸಮಾಜಾಯಿಷಿ ನೀಡಿ ಕಳುಹಿಸಿದ್ದರು.

ಅವರು ಕ್ರಮ ತೆಗೆದುಕೊಳ್ಳದಿರುವುದರಿಂದ ಮತ್ತೆ 2023 ರ ಆಗಸ್ಟ್ 16 ರಂದು   ಬ್ಯಾಂಕಿನ ಅಧಿಕಾರಿಗಳನ್ನು ಭೇಟಿಯಾಗಿ  ವಿಚಾರಿಸಿದರು. ಈ ವೇಳೆ ಶಾಖೆಯ ಮುಖ್ಯ ವ್ಯವಸ್ಥಾಪಕರು ಗ್ರಾಹಕರ ಕೋರಿಕೆಯನ್ನು ತಿರಸ್ಕರಿಸಿ, ಬ್ಯಾಂಕಿನ ನಿಯಮದಂತೆ ಮತ್ತು ಆಡಿಟ್‍ಗೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ ನೀಡಿದ ಗೃಹರಕ್ಷಕ ಪಾಲಸಿಯನ್ನು ರದ್ದುಗೊಳಿಸಲು ಬರುವುದಿಲ್ಲವೆಂದು ಹಿಂಬರಹ ನೀಡಿ ಕಳುಹಿಸಿದ್ದರು.

ಗೃಹಸಾಲ ಪಡೆದ ಚಂದ್ರಶೇಖರ್  ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ  ದೂರು ಸಲ್ಲಿಸಿದ್ದರು. ಗ್ರಾಹಕರ ನ್ಯಾಯಾಲಯವು ತೀರ್ಪಿನಲ್ಲಿ ಈ ನಡಾವಳಿಕೆಯು ಗ್ರಾಹಕರ ಹಕ್ಕುಗಳ ವಿರುದ್ದವಾದ ಚಟುವಟಿಕೆಯಾಗಿದ್ದು, ಗೃಹಸಾಲ ನೀಡುವಾಗ ಭದ್ರತೆಗಾಗಿ ಯಾವುದೇ ರೀತಿಯ ಪಾಲಿಸಿಗಳನ್ನು ನೀಡಲೇಬೇಕೆಂಬ ಯಾವುದೇ ಪ್ರಾಧಿಕಾರದ ನಿರ್ದೇಶನವಿಲ್ಲದೇ ಮತ್ತು ಸರ್ಕಾರದ ಆದೇಶವಿಲ್ಲದಿದ್ದರೂ ಸಾರ್ವಜನಿಕ ಬ್ಯಾಂಕ್‍ಗಳು ಇಂತಹ ಅನುಚಿತ ವ್ಯಾಪಾರ ಪದ್ದತಿಗಳನ್ನು ಅನುಸರಿಸುತ್ತಿರುವುದು ಗ್ರಾಹಕರ ಹಿತರಕ್ಷಣೆಗೆ ಮಾರಕವಾಗಿದೆ ಎಂದು ಅಭಿಪ್ರಾಯಿಸಿ, ಬ್ಯಾಂಕ್‍ನವರು ಕೈಗೊಂಡ ಕ್ರಮ ಅಸಿಂಧುವೆಂದು ಪರಿಗಣಿಸಿ, ಕಡಿತ ಮಾಡಿದ  28344/- ರೂ.ಗಳನ್ನು ವಾಪಸ್ ಸಾಲದ ಖಾತೆಗೆ ಜಮಾ ಮಾಡಲು ಮತ್ತು ಮಾನಸಿಕ ವ್ಯಥೆಗೆ ಪರಿಹಾರವಾಗಿ ರೂ.50000/- ಗಳನ್ನು, ದೂರು ವೆಚ್ಚವಾಗಿ ರೂ.10000/-   ಸೇರಿ ಒಟ್ಟು  88,344/- ರೂ.ಗಳನ್ನು ಸಂಬಂಧಪಟ್ಟ ಹಿರಿಯ ಶಾಖಾಧಿಕಾರಿಗಳ ಸಂಬಳದಿಂದ ಕಡಿತ ಮಾಡಿ ಪಾವತಿ ಮಾಡಲು ಆದೇಶಿಸಲಾಗಿದೆ. 

 ತೀರ್ಪು ವೇಳೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ತ್ಯಾಗರಾಜನ್, ಮಹಿಳಾ ಸದಸ್ಯರಾದ ಗೀತಾ ಉಪಸ್ಥಿತರಿದ್ದರು.

error: Content is protected !!