ರಾಣೇಬೆನ್ನೂರು ಪ್ರಗತಿ ಬಂಧು ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ಬಸವರಾಜ ಹುಲ್ಲತ್ತಿ
ರಾಣೇಬೆನ್ನೂರು, ನ. 3 – ಗ್ರಾಮೀಣ ಜನರು ಸ್ವಾವಲಂಬನೆ ಜೀವನ ಸಾಗಿಸಲು ಆರ್ಥಿಕವಾಗಿ, ಶೈಕ್ಷಣಿಕವಾಗಿ ತಿಳುವಳಿಕೆ ದೃಷ್ಟಿಯಿಂದಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಪ್ರಯೋಜನಕಾರಿ ಯಾಗಿವೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬಸವರಾಜ ಹುಲ್ಲತ್ತಿ ಹೇಳಿದರು.
ನಗರದ ಕಾಕಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಕಳೆದ 14 ವರ್ಷಗಳಿಂದ ಈ ಭಾಗದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಜನರಿಗೆ ಬಹಳ ಪೂರಕವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ಕಾರ್ಯಗಳು ಪಾರದರ್ಶಕವಾಗಿದ್ದು, ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ, ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ದಾರಿ, ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿರುವ ಕಾರ್ಯ ಕ್ರಮಗಳ ಕುರಿತು ವಿವರಿಸಿದರು.
ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬ್ಯಾಂಕ್‌ನ ಆರ್ಥಿಕ ಸಹಯೋಗದಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಬ್ಯಾಂಕಿನಿಂದ ಸಂಘದ ಸದಸ್ಯರಿಗೆ ಪ್ರಗತಿ ನಿಧಿ ಸಾಲಕ್ಕೆ ನೀಡುತ್ತಿರುವ ಬಡ್ಡಿಯ ಬಗ್ಗೆ ಹಾಗೂ ಬ್ಯಾಂಕುಗಳಿಗೆ ಸಂಘದ ಸದಸ್ಯರು ನೀಡಬೇಕಾದ ದಾಖಲಾತಿಯ ಬಗ್ಗೆ ಮತ್ತು ಬ್ಯಾಂಕಿನಿಂದ ತಾಲ್ಲೂಕಿನಾದ್ಯಂತ ಈಗಾಗಲೇ ವಿತರಿಸಿದ ಪ್ರಗತಿ ನಿಧಿ ಸಾಲದ ಬಗ್ಗೆ ಹಾಗೂ ಮರುಪಾವತಿಯ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬುಳ್ಳಪ್ಪ ಬಣಕಾರ, ಯೋಜನಾಧಿಕಾರಿ ಎಂ.ಪಿ ಮಂಜುನಾಥ್ ಮಾತನಾಡಿದರು.