ದೀಪಾವಳಿಯ ಮರುದಿನ ಸಂಜೆ ವ್ಯಾಪಾರ ವ್ಯವಹಾರ ಮಂದವಾಗಿತ್ತು. ವರ್ತಕರೆಲ್ಲಾ ಆರಾಮಾಗಿ ಹರಟೆ ಹೊಡೆಯುತ್ತಿದ್ದರು. ಆ ವೇಳೆಗೆ `ಸುವ್ವಿ ಬಾ ಸಂಗಯ್ಯಾ…’ ಎಂದು ಹಾಡುತ್ತಾ ಸಂಕೇತ ಭಾಷೆಯಲ್ಲಿ ಹೆಸರು ಹೇಳುವವರು ಬೀದಿಯಲ್ಲಿ ಬಂದರು.
ಸಾಮಾನ್ಯವಾಗಿ ಇವರು ಮೂರು ಮಂದಿ ತಲೆಗೆ ತಿಳಿ ಕಾವಿ ಬಣ್ಣದ ಪೇಟ ಸುತ್ತಿಕೊಂಡು, ಅದೇ ಬಣ್ಣದ ಉದ್ದ ತೋಳಿನ ಅಂಗಿ, ಅದರ ಮೇಲೆ ಬಲ ಕಂಕುಳಿನಿಂದ ಎಡ ಹೆಗಲ ಮೇಲೆ ಉತ್ತರೀಯ ಹೊದ್ದು, ಬಿಳಿ ಕಚ್ಚೆ ಪಂಚೆ, ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ದಪ್ಪ ರುದ್ರಾಕ್ಷಿ ಮಾಲೆ, ಕಿವಿಗಳಿಗೂ ರುದ್ರಾಕ್ಷಿಯ ಓಲೆ ಕಾಸು ಎಡ ಮೊಣಕೈಯಲ್ಲಿ ನೇತು ಬಿದ್ದ ಚಿಕ್ಕ ಜೋಳಿಗೆ. ಇವರಲ್ಲಿ ಒಬ್ಬರು ಎಡ ಕೈಯಲ್ಲಿ ಲಾಟೀನು ಹಿಡಿದು ಮುಂದೆ ಬರುತ್ತಿದ್ದರೆ ಅವರಿಂದ ಹತ್ತಿಪ್ಪತ್ತು ಮಾರು ದೂರದಲ್ಲಿ ಮತ್ತಿಬ್ಬರು ಬೀದಿಯ ಆಚೆ ಪಕ್ಕದಲ್ಲಿ ಚಿಕ್ಕ ತಾಳ ಭಾರಿಸುತ್ತಾ `ಸುವ್ವಿ ಬಾ ಸಂಗಯ್ಯಾ, ಸುವ್ವಿ ಬಾ ಲಿಂಗಯ್ಯಾ, ಸುವ್ವಿ ಬಾ ಚನ್ನ ಬಸವಯ್ಯ ಸುವ್ವಿ’.. ಎಂದು ಹಾಡುತ್ತಾ ಬರುತ್ತಿರುತ್ತಾರೆ.
ಲಾಟೀನು ಹಿಡಿದು ಬರುವವರಿಗೆ ಯಾರಾದರೂ ಕಾಸು ಕೊಟ್ಟು ತಮ್ಮ ಹೆಸರನ್ನು ಹೇಳಿದರೆ ಈತ ಎಡಗೈಯ ಲಾಟೀನು ಎತ್ತಿ ಹಿಡಿದು, ಬಲಗೈ ಹಸ್ತದಿಂದ ಸಂಕೇತಗಳನ್ನು ತೋರಿಸಿದಾಗ ದೂರದಲ್ಲಿ ತಾಳ ಬಡಿಯುತ್ತಾ ಬರುವವರು ಆ ಹೆಸರನ್ನು ಹೇಳುತ್ತಾರೆ!!. ಉದಾಹರಣೆಗೆ ಕಾಸು ಕೊಟ್ಟವರು `ದೊಡ್ಡಮನಿ ಶಿವರುದ್ರಪ್ಪ’ ಎಂದು ಹೇಳಿದರೆ ಲಾಟೀನು ಹಿಡಿದ ಈತ ಬೆರಳುಗಳನ್ನು ಮಡಚುತ್ತಾ ಬಿಡಿಸುತ್ತಾ ಮೇಲಕ್ಕೆ ಕೆಳಕ್ಕೆ ಅಡ್ಡಕ್ಕೆ ಹಸ್ತವನ್ನು ಆಡಿಸಿ ತೋರಿಸಿದಾಗ ದೂರದಿಂದ ಅದನ್ನು ನೋಡಿದ ತಾಳದವನು `ದೊಡ್ಮನಿ ಶಿವರುದ್ರಪ್ಪ ಅಲ್ಲೇನ್ರಿ ಮತ್ತಿನ್ಯಾರ್ ಹೇಳಯ್ಯ ಸುವ್ವಿ ಬಾ ಚೆನ್ನಬಸವಯ್ಯ ಸುವ್ವಿ’ ಎಂದು ಹೇಳುವನು.
ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು ಹಾಗೂ ನೆನಪುಗಳು
ಒಮ್ಮೊಮ್ಮೆ ಹಸ್ತದಲ್ಲಿ ಸಂಕೇತ ತೋರಿಸುವ ಬದಲು `ಒಂದು ಜಾಮೂನು ಎರಡು ಇಡ್ಲಿ ಒಂದು ವಡಿ ಅರ್ಧ ಕಾಫಿ’ ಹೀಗೆ ಏನೇನೋ ಹೇಳಿದರೂ ಆ ಕಡೆಯವನು ಹಣ ಕೊಟ್ಟವರ ಹೆಸರನ್ನು ಸರಿಯಾಗೇ ಹೇಳುತ್ತಿದ್ದನು!!. ಕೇಳಲು ನೋಡಲು ಇದು ತುಂಬಾ ಮೋಜು. ಹಾಗಾಗಿ ಬಾಲ್ಯದಲ್ಲಿ ನಾವೆಲ್ಲಾ ಇವರು ಬಂದರೆಂದರೆ ಅವರ ಹಿಂದೆ ಬೀದಿ ಉದ್ದಕ್ಕೂ ಹೋಗುತ್ತಿದ್ದೆವು. ಸುಮಾರು 60 ವರ್ಷಗಳ ಕೆಳಗೆ ದೀಪಾವಳಿಯ ಮರುದಿನ ಒಂದು ಸಂಜೆ ಇವರು ಹಳೆ ಊರಿನ ಕಾಯಿಪೇಟೆ ಕಡೆಯಿಂದ ತಂಬಾಕು ಪೇಟೆಗೆ ಬಂದರು. ಅವರಿನ್ನೂ ಮೂಲೆಯ ಸಿಟಿ ಆನಂದ ಭವನ ಹೋಟೆಲ್ ಖಮಿತ್ಕರ್ ಈಶ್ವರಪ್ಪ ಅಂಗಡಿ ಮುಂಭಾಗ ದಾಟಿ ಹೋಲೂರು ಈಶ್ವರಪ್ಪನವರ ಅಂಗಡಿ ಮುಂದೆ ಬರುತ್ತಿದ್ದಂತೆಯೇ ಈ ಕಡೆ ನೀಲಗುಂದ ಬಕ್ಕಪ್ಪ ಹಾಗೂ ಎದುರಿನ ಶಾಮನೂರು ಸಂಗಪ್ಪ ಅಂಗಡಿಗಳ ಮುಂದೆ ನಿಂತ ಕೆಲ ಗುಮಾಸ್ತರು ಮಾತಾಡಿಕೊಂಡರು.
ಹಸ್ತ ಸಂಕೇತ ನೋಡಿ ಹೆಸರುಗಳನ್ನು ಸಲೀಸಾಗಿ ಹೇಳುತ್ತಾರೆ. ಏಕೆಂದರೆ ಅವು ರೂಢಿಯಾಗಿರುತ್ತವೆ. ಈ ಬಾರಿ ನಾವು ಹೆಸರಿನ ಬದಲು ಬೇರೆ ಏನಾದರೂ ಕಷ್ಟಕರವಾದ ಶಬ್ದಗಳನ್ನು ಕೊಡುವುದೆಂದು ನಿರ್ಧರಿಸಿದರು. ಏನು ಕೊಡುವುದೆಂದು ಚರ್ಚಿಸುತ್ತಿದ್ದರು. ಅದೇ ವೇಳೆಗೆ ಕಾಳಿಕಾದೇವಿ ರಸ್ತೆಯಿಂದ ಬಂದು ಪ್ರಕಾಶ್ ಕಾಫಿ ವರ್ಕ್ಸ್ ಕಡೆ ಹೋಗುತ್ತಿದ್ದ ಮುದೇಗೌಡ್ರ ಸಿದ್ಲಿಂಗಪ್ಪನವರು `ಕೊಡೋದಾದ್ರೆ ಏನಾದ್ರೂ ಇಂಗ್ಲೀಷಿಂದು ಫಾರಿನ್ ದು ಕೊಡ್ರಿ ನೋಡೋಣ’ ಎಂದರು.
ಎಲ್ಲರೂ ಸೇರಿ ಅಲ್ಲೇ ಇದ್ದ ಅಜ್ಜಂಪುರದ ರಾಮಣ್ಣ ಶೆಟ್ಟರನ್ನು ಕೇಳಿದರು. `ಕೊಲಂಬಸ್ ಡಿಸ್ಕವರ್ಡ್ ಅಮೇರಿಕ’ ಎಂಬುದನ್ನು ಸೂಚಿಸಿದರು. ಇದು ತುಂಬಾ ಕಷ್ಟ
ಅವರಿಂದ ಹೇಳಲು ಸಾಧ್ಯವೇ ಇಲ್ಲ ಎಂದರು ಕೆಲವರು. ಆದರೂ ಪರೀಕ್ಷೆ ಮಾಡೋಣ ಎನ್ನುವಷ್ಟರಲ್ಲಿ ಸುವ್ವಿಯವರು ಅಲ್ಲಿಗೆ ಬಂದೇ ಬಿಟ್ಟರು. ಇವರು ಕಾಸು ಕೊಟ್ಟು ಹೆಸರಿನ ಬದಲು ಇದನ್ನು ಹೇಳಿದರು.
ವಿಚಲಿತನಾಗದ ಲಾಟೀನಿನವ ಹಸ್ತ ಬೆರಳುಗಳಿಂದ ಸಂಕೇತ ತೋರಿಸುತ್ತಲೇ ಆ ಕಡೆ ದೂರದಲ್ಲಿದ್ದ ತಾಳದವನು `ಕೊಲಂಬಸ್ಸು ಡಿಸ್ಕವರ್ಡು ಅಮೆರಿಕಾ ಅಲ್ವೇನ್ರಿ, ಮತ್ತಿನ್ನೇನು ಹೇಳ್ರಯ್ಯಾ ಸುವ್ವಿ ಬಾ ಚೆನ್ನ ಬಸವಯ್ಯ ಸುವ್ವಿ’ ಎಂದು ಹೇಳಿಯೇ ಬಿಟ್ಟ!!!. ಇದ್ದವರೆಲ್ಲಾ ಬೆರಗಾಗಿ ಭೇಷ್ ಭೇಷ್ ಎಂದು ಮತ್ತಷ್ಟು ದುಡ್ಡು ಕೊಟ್ಟರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ