ಜಗಳೂರು, ಅ. 29- ಪಟ್ಟಣದ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಗಂಗಾಮತಸ್ಥ ಸಮುದಾಯದ ವತಿಯಿಂದ ಕುಂಭಮೇಳದೊಂದಿಗೆ ವಿಶೇಷ ಗಂಗಾಪೂಜೆ ನೆರವೇರಿಸಲಾಯಿತು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಹಿಂಗಾರು ಮಳೆ ಹೆಚ್ಚಾಗಿದೆ. ಪರಿಣಾಮ ಕೆರೆ ಕೋಡಿ ಬಿದ್ದಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಕ್ಕಳನ್ನು ಪೋಷಕರು ಮೈದುಂಬಿ ಹರಿಯುತ್ತಿ ರುವ ಕೆರೆಕಟ್ಟೆ, ಹಳ್ಳಕೊಳ್ಳ, ಕೃಷಿ ಹೊಂಡಗಳಿಂದ ದೂರವಿಡಬೇಕು. ಅತಿವೃಷ್ಟಿ ಯಿಂದಾದ ಮನೆಹಾನಿ, ಬೆಳೆ ನಷ್ಟಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ ಸಹಕಾರದಿಂದ 57 ಕೆರೆ ತುಂಬಿಸುವ ನೀರಾವರಿ ಯೋಜನೆ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ನಂತರ ದೀಟೂರಿನಿಂದ ಪ್ರಾಯೋಗಿಕವಾಗಿ ತುಪ್ಪದಹಳ್ಳಿ ಕೆರೆಗೆ ನೀರು ಹರಿಸಲಾಗಿತ್ತು. ರೈತರು ನೀರಾವರಿ ಯೋಜನೆ ಭರವಸೆಯಿಂದ ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಇದೀಗ ಕೆರೆಗಳು ಕೋಡಿ ಬಿದ್ದಿರುವುದು ಭವಿಷ್ಯದಲ್ಲಿ ಬರದ ನಾಡು ಅಡಿಕೆ ಬೆಳೆಯುವ ಮಲೆನಾಡಿನಂತೆ ಕಂಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ಪೂರ್ವಜರ ಕಾಲದಲ್ಲಿ ನಿರ್ಮಿಸಿದ ಕೆರೆಗಳು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುತ್ತಿವೆ. ನೀರಾವರಿ ಮೂಲಗಳಿಲ್ಲದೆ ದಶಕಗಳಿಂದ ಬರಿದಾದ ಒಡಲಿನ ಕೆರೆಗಳು ಇದೀಗ ಮೈದುಂಬಿ ಹರಿಯುತ್ತಿವೆ ಬರದ ಹಣೆಪಟ್ಟಿ ಕಳಚಲಿದೆ ಎಂದರು.
ಡಾ.ರವಿಕುಮಾರ್, ತಿಪ್ಪೇಸ್ವಾಮಿ ಗೌಡ, ಶಿವನಗೌಡ, ಆರ್.ತಿಪ್ಪೇಸ್ವಾಮಿ, ಆರ್.ಗೋಪಿ, ಜಯ್ಯಣ್ಣ, ಕೃಷ್ಣಪ್ಪ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷೆ ಲೋಕಮ್ಮ ಓಬಳೇಶ್ ಸೇರಿದಂತೆ ಪ.ಪಂ. ಸದಸ್ಯರು, ಮುಖಂ ಡರುಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.