ಹರಪನಹಳ್ಳಿ, ಅ. 27 – ಪ್ರಗತಿ ಪರ ಹೊರಾಟಗಾರ ದಿ. ಕಬ್ಬಳ್ಳಿ ಬಸವರಾಜ್ ಅವರ ನುಡಿ ನಮನ ಕಾರ್ಯಕ್ರಮವು ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಅರಸಿಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀ ಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಮಠದ ಸದ್ಭಕ್ತನಾಗಿ ಹೊರಾಟದ ಬದುಕಿನಲ್ಲಿ ಬೆಳೆದ ಕಬ್ಬಳ್ಳಿ ಬಸವರಾಜ್ ಹಣದಲ್ಲಿ ಶ್ರೀಮಂತಿಕೆ ಗಳಿಸದೇ, ಪರೋಪಕಾರಿಯಾಗಿ ಜನರ ಮನಸ್ಸು ಗೆಲ್ಲುವ ಮೂಲಕ ಗುಣದಲ್ಲಿ ಶ್ರೀಮಂತನಾಗಿದ್ದು ಕೊಂಡು ಸಂಘಟನೆ ಹೋರಾ ಟಗಾರರ ಬಳಗದೊಡನೆ ಸಕ್ರಿಯವಾಗಿ ಪಾಲ್ಗೊಂಡು, ಅನ್ಯಾಯ, ಶೋಷಣೆ ವಿರೋಧಿಸುತ್ತಿದ್ದರು. ಮೂಲ ಸೌಕರ್ಯಗಳ ಸಮರ್ಪಕ ಜಾರಿಗಾಗಿ ಜನ ಪ್ರತಿನಿಧಿಗಳನ್ನು ಎಚ್ಚರಿಸುತ್ತಿದ್ದರು ಎಂದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಬಸವರಾಜ್ ಅವರ ಜಾತ್ಯತೀತ, ನಿಸ್ವಾರ್ಥ ಭಾವನೆ ಸಮಾಜಕ್ಕೆ ಆದರ್ಶವಾಗಲಿ ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಅರಸೀಕೆರೆಯ ವೈ.ಡಿ. ಅಣ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ಎಸ್.ಟಿ. ಘಟಕದ ರಾಜ್ಯ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ದಿ. ಬಸವರಾಜ್ ಅವರು ಪ್ರಗತಿಪರ ಚಿಂತನೆ, ಹೋರಾಟ ಮನೋಭಾವ ಮೈಗೂಡಿಸಿಕೊಂಡು ಶೋಷಿತ, ದಮನಿತರ ಧ್ವನಿಯಾಗಿದ್ದರು ಎಂದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, 371ಜೆ ಜಾರಿಗಾಗಿ ನಡೆದ ಜನಪರ ಹೋರಾಟದ ಯಶಸ್ವಿಗೆ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನೀರಾವರಿ ಹೋರಾಟದಲ್ಲಿ ಬಸವರಾಜ್ ಅವರು ಭಾಗವಹಿಸಿದ್ದನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಪ್ರಗತಿಪರ ಚಿಂತನೆ ಮೂಲಕ ಬದುಕು ಸವೆಸಿದ ಸ್ನೇಹಮಯಿ. ಭ್ರಷ್ಟಾಚಾರ, ಜಾತೀಯತೆಯ ವಿರೋಧವಾಗಿ ಹಲವಾರು ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿ ಗೆಲುವು ಕಂಡವರು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಹನುಮಂತಪ್ಪ, ಪ್ರಶಾಂತ ಪಾಟೇಲ್, ಹೊಸಹಳ್ಳಿ ಮಲ್ಲೇಶ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ, ಅರಸೀಕೆರೆ ಪೂಜಾರ್ ಮರಿಯಪ್ಪ, ಕೆರೆಗುಡಿಹಳ್ಳಿ ಹಾಲೇಶ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೋತಿನಾಯ್ಕ, ಹೊಸಹಳ್ಳಿ ಮಲ್ಲೇಶ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಜ್ಜಿ ನಾಗರಾಜ, ವಕೀಲ ಕೆ.ಡಿ. ಮರಿಯಪ್ಪ, ಅಂಗನವಾಡಿ ಕಾರ್ಯಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಸಮ್ಮ, ಇಪ್ಟಾ ಕಲಾವಿದ ಹೆಗ್ಗೆರೆ ರಂಗಪ್ಪ ಮಾತನಾಡಿದರು.
ಎಡಿಬಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ರಾಜಪ್ಪ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಕಳ್ಳಿ ಹನುಮಂತಪ್ಪ, ಹೋಸಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶ್ರೀನಿವಾಸ, ನಿವೃತ್ತ ಶಿಕ್ಷಕ ಬಾಲೇನಹಳ್ಳಿ ರೇವಣಸಿದ್ದಪ್ಪ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗನಗೌಡ, ಮುಖಂಡ ಕಬ್ಬಳ್ಳಿ ಪರಸಪ್ಪ, ಕಬ್ಬಳ್ಳಿ ಮೈಲಪ್ಪ, ಕಬ್ಬಳ್ಳಿ ಮಂಜಮ್ಮ, ಕಬ್ಬಳ್ಳಿ ಪ್ರಶಾಂತ, ಹಾದಿಮನಿ ನಾಗರಾಜ, ಮೂಗಪ್ಪ, ಯರಬಳ್ಳಿ ವಿಜಯಕುಮಾರ, ಬೂದಿಹಾಳ್ ಮುರುಗೇಶ ಸೇರಿದಂತೆ ಇತರರು ಇದ್ದರು.