ಎಂಎಸ್ಬಿ ಕಾಲೇಜ್ ಪುನಶ್ಚೇತನ ಕಾರ್ಯಕ್ರಮದಲ್ಲಿ ಪ್ರೊ. ಎಸ್.ಬಿ ಶಿವಪ್ರಸಾದ್
ದಾವಣಗೆರೆ, ಅ.22- ಪದವಿ ಪಠ್ಯದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯೂ ಸಹ ಇಂದು ತುಂಬಾ ಅಗತ್ಯವಾಗಿದೆ ಎಂದು ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್.ಬಿ ಶಿವಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಮಾಗನೂರು ಸರ್ವ ಮಂಗಳಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪುನಶ್ಚೇತನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿ, ಮಾನವೀಯ ಶಾಸ್ತ್ರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪದವಿ ಶಿಕ್ಷಣ ಮುಗಿಯುವುದರೊಳಗೆ ಸ್ಪರ್ಧಾತ್ಮಕ ಪರೀಕ್ಷೆಯ ಭದ್ರ ಬುನಾದಿಯನ್ನು ಯಾವ ಯಾವ ಆಯಾಮದಲ್ಲಿ ನಿರ್ಮಿಸಿಕೊಳ್ಳಬೇಕು ಎಂಬುದನ್ನು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನೀಲಾಂಬಿಕ ಜಿ.ಸಿ ಅವರು ಮಾತನಾಡಿ, ಆಧುನಿಕ ತಂತ್ರ ಜ್ಞಾನದ ಈ ಕಾಲದಲ್ಲಿ ಎಲ್ಲಾ ನಿಮ್ಮ ಅಂಗೈಯಲ್ಲಿ ಸಿಗುವ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಈಶ್ವರ್ ಕೆ. ವೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ ಮಂಜಪ್ಪ ವಂದಿಸಿದರು. ಕು. ಕವನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಪವಿತ್ರ ನಿರೂಪಿಸಿದರು. ಈ ಸಂದರ್ಭದಲ್ಲಿ ಡಾ. ವಿಜಯ್ ಕುಮಾರ್ ಎ. ಬಿ, ಡಾ. ರಾಘವೇಂದ್ರ ಆರ್, ಡಾ. ಪ್ರವೀಣ್ ಕುಮಾರ್ ಓ, ಪ್ರೊ. ಸತೀಶ್ ಹಾಗೂ ಬೋಧಕ, ಬೋಧಕರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.