ದಾವಣಗೆರೆ, ಅ.25- ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿ ಭತ್ತದ ಬೆಳೆಯಲ್ಲಿ ಪರ್ಯಾಯ ಹಸಿ ಮತ್ತು ಒಣಗಿಸುವ ಮುಂಚೂಣಿ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿದರು.
ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ. ಓ. ಮಾತನಾಡುತ್ತಾ, ನೀರು ನಿಲ್ಲಿಸಿ ಭತ್ತದ ಬೇಸಾಯ ಮಾಡುವ ಗದ್ದೆಗಳಲ್ಲಿ ಶೇ.10 ರಿಂದ ಶೇ.16 ಹಸಿರು ಮನೆಯ ಅನಿಲ ಹೊರ ಸೋಸುವಿಕೆ ವಿವಿಧ ದೇಶಗಳಿಂದ ಆಗುತ್ತದೆ. ಈ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಯಿಂದ ಭತ್ತದ ಗದ್ದೆಯಲ್ಲಿ ನೀರು ನಿಲ್ಲುವ ಸಮಯ ಕಡಿಮೆಯಾಗುವುದರಿಂದ ಮಿಥೇನ್ ಉತ್ಪಾದನೆಯೂ ಶೇ.30 ರಿಂದ ಶೇ.50 ರಷ್ಟು ಕಡಿಮೆಯಾಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಬಸವರಾಜ್ ಮಾತನಾಡಿ, ಈ ವರ್ಷ ಉತ್ತಮ ಮಳೆ ಆಗುವುದರ ಜೊತೆಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಪಿವಿಸಿ ಪೈಪ್ ಭತ್ತದ ಗದ್ದೆಯಲ್ಲಿ ಅಳವಡಿಸುವ ಪದ್ಧತಿಯಿಂದ ಬೆಳೆಗೆ ಬೇಕಾದ ಸಮಯದಲ್ಲಿ ನೀರನ್ನು ಒದಗಿಸಿರುತ್ತೇವೆ. ಇದರಿಂದ ರೋಗ ಮತ್ತು ಕೀಟ ಬಾಧೆಗಳೂ ಸಹ ಕಡಿಮೆಯಾಗಿವೆ ಎಂದರು.
ಮಣ್ಣು ವಿಜ್ಞಾನಿಗಳಾದ ಎಚ್.ಎಮ್. ಸಣ್ಣಗೌಡ್ರು ಮಾತನಾಡಿ, 30 ಸೆಂ. ಮೀ. ಉದ್ದದ ಪಿವಿಸಿ ಪೈಪನ್ನು ಅಳವಡಿಸುವ ತಂತ್ರಜ್ಞಾನವನ್ನು ರೈತರು ತಿಳಿದುಕೊಂಡರೆ ಮುಂದಿನ ದಿನಗಳಲ್ಲಿ ನೀರು ಮತ್ತು ಪರಿಸರವನ್ನು ಸಂರಕ್ಷಿಸಬಹುದು ಹಾಗೂ ಕೃಷಿ ಡ್ರೋನ್ ಬಳಸಿ ಭತ್ತಕ್ಕೆ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು. ಈ ತಂತ್ರಜ್ಞಾನದಿಂದ ಸಮಯ ಮತ್ತು ನೀರು ಉಳಿತಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬಸವರಾಜ್, ರಾಜು, ಸುರೇಶ್, ಪಂಚಯ್ಯ ಮಹೇಂದ್ರ, ನಾಗರಾಜ್ ಹಾಗೂ ಸಂಜೀವ್, ಗರುಡ ಕಂಪನಿಯವರು ಭಾಗವಹಿಸಿದ್ದರು.