ಹರಪನಹಳ್ಳಿ, ಅ.24- ತಾಲ್ಲೂಕಿನ ಟಿ.ತುಂಬಿಗೇರಿ ಗ್ರಾಮದಲ್ಲಿನ ವಾಂತಿ-ಬೇಧಿ ಪ್ರಕರಣದಿಂದಲೇ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ, ವಿಜಯನಗರ ಜಿಲ್ಲಾ ಪಂಚಾಯ್ತಿ ಸಿಇಒ ಅವರು ತುಂಬಿಗೇರಿ ಗ್ರಾಮ ಒಳಪಡುವ ರಾಗಿಮಸಲವಾಡ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಸ್.ಶ್ರೀನಿವಾಸ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಾಮಗ್ರಿಗಳು ಗ್ರಾಮಕ್ಕೆ ಆಗಮಿಸಿದವು.
ಈ ವೇಳೆ ಪೈಪ್ ಲೈನ್ ಬದಲಾವಣೆಗೆ ಸೂಚಿಸಿದ ಶಾಸಕರು, 2-3 ಕಡೆ ಸಿಸಿ ರಸ್ತೆ, ಚರಂಡಿ ಕಾಮಗಾರಿ ಗಳನ್ನು ಅತಿ ಶೀಘ್ರದಲ್ಲೇ ಮಾಡಿಸಿಕೊಡಲಾಗುವುದು. ಹೊಸ ಸಾರಿಗೆ ಬಸ್‌ಗಳನ್ನು ಈ ಗ್ರಾಮಕ್ಕೆ ಬಿಡಿಸಲಾಗುವುದು ಎಂದು ಭರವಸೆ ನೀಡಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆ – ಮನೆಗೆ ತೆರಳಿ ಜನರಿಗೆ ಸ್ವಚ್ಚತೆ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಬ್ಲೀಚಿಂಗ್ ಪೌಡರ್ ಸಿಂಪರಣೆ, ತಿಪ್ಪೆಗಳನ್ನು ತೆಗೆಸಲು ಗ್ರಾಮ ಪಂಚಾಯ್ತಿಯವರಿಗೆ ಸೂಚಿಸಿದರು.
ಮೃತ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಶಾಸಕರು ವೈದ್ಯಕೀಯ ವರದಿ ನೋಡಿ, ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭಾ ಸದಸ್ಯರಾದ ವೆಂಕಟೇಶ್, ಗಣೇಶ್, ಲಾಟಿ ದಾದಾಪೀರ್, ಮುಖಂಡರಾದ ವಸಂತಪ್ಪ, ಎಲ್.ಮಂಜಾನಾಯ್ಕ ತಹಶೀಲ್ದಾರ್ ಗಿರೀಶ್‌ಬಾಬು, ತಾ.ಪಂ ಇಒ ಚಂದ್ರಶೇಖರ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಎಂ.ಕಮ್ಮಾರ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಕಿರಣಕುಮಾರನಾಯ್ಕ, ಪಿಎಸ್‌ಗಳಾದ ಶಂಭುಲಿಂಗ ಹಿರೇಮಠ, ಕಿರಣಕುಮಾರ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಈ ಸಂದರ್ಭದಲ್ಲಿದ್ದರು.