ದಾವಣಗೆರೆ, ಅ.23- ಮೊನ್ನೆ ಸತತವಾಗಿ ಸುರಿದ ಮಳೆಯಿಂದಾಗಿ ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಹತ್ತಿರದ ಹಳ್ಳದ ನೀರು ಹರಿದು ಹೊನ್ನೂರು ಕೆರೆಗೆ ಭರ್ತಿಯಾಗುತ್ತಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹೊನ್ನೂರು, ಮಲ್ಲಶೆಟ್ಟಿಹಳ್ಳಿ ಮತ್ತು ಕೊಗ್ಗನೂರು ಸೇರಿದಂತೆ ಆ ಭಾಗದ ಜನರು ತಂಡೋಪತಂಡವಾಗಿ ಬರುತ್ತಿರುವುದು ಕಂಡು ಬಂದಿರುತ್ತದೆ.
ಈ ಹಿಂದ ಬಂದ ಮಳೆ ಬೆಳೆಗಳಷ್ಟೆ ಸೀಮಿತವಾಗಿತ್ತು. ಕಳೆದ 3 ತಿಂಗಳಿನಿಂದ ಹಳ್ಳ ಹರಿಯುವ ಹಾಗೆ ಮಳೆಯಾಗಿರಲಿಲ್ಲ. ಚಿತ್ತಾ ಮಳೆ ಬಂದಿತ್ತಾದರೂ ಹಳ್ಳ ಹರಿದು ಬಂದಿರಲಿಲ್ಲ. ಆದರೆ, ಕಳೆದ ಸ್ವಲ್ಪ ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಹಳ್ಳ ಹರಿಯುತ್ತಿರುವುದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿದೆ.
ಈ ಹಿಂದೆ ಮಳೆ ಸರಿಯಾಗಿ ಬಾರದೇ ಇರುವುದರಿಂದ 400 ಎಕರೆ ವಿಸ್ತೀರ್ಣದ ಹೊನ್ನೂರು ಕೆರೆ ಖಾಲಿ ಉಳಿದಿತ್ತು. ಇದರಿಂದ ದನ-ಕರುಗಳಿಗೆ ನೀರಿನ ಅಭಾವ ಉಂಟಾಗಿತ್ತು. ಆದರೆ ಈಗ ಆ ಸಮಸ್ಯೆಗೆ ತೆರೆ ಬಿದ್ದಿದೆ.
ತುಂಗಭದ್ರಾ ನದಿಯಿಂದ 22 ಕೆರೆ ಏತ ನೀರಾವರಿ ಯೋಜನೆಯಿದ್ದು, ಅದು ಅವೈಜ್ಞಾನಿಕವಾಗಿರುತ್ತದೆ. ಅಳವಡಿಸಿರುವ ಪೈಪ್‌ಲೈನ್‌ಗಳು ಪದೇ ಪದೇ ಹೊಡೆದು 2 ಪಂಪ್‌ಹೌಸ್ ಹಾಗೆ ನಿಂತಿವೆ.
ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊನ್ನೂರು ಕೆರೆ ಭರ್ತಿಯಾಗಿರುವುದು ಈ ಭಾಗದ ಜನರಿಗೆ ವರುಣನ ಕೃಪೆಯಾಗಿದೆ ಎಂದು ಮಲ್ಲಶೆಟ್ಟಿಹಳ್ಳಿ ಗ್ರಾಮದ 22 ಕೆರೆ ಹೋರಾಟ ಸಮಿತಿಯ ಉಪಾಧ್ಯಕ್ಷ ಜಿ.ಎಸ್. ರೇವಣಸಿದ್ದಪ್ಪ ದಳಪತಿ ಹೇಳಿದರು.