ತಂತ್ರಜ್ಞಾನದ ಭರಾಟೆಯಲ್ಲಿ ಮೌಲ್ಯ ಕುಗ್ಗದಿರಲಿ

ತಂತ್ರಜ್ಞಾನದ ಭರಾಟೆಯಲ್ಲಿ ಮೌಲ್ಯ ಕುಗ್ಗದಿರಲಿ

`ಖಗೋಳ ವಿಸ್ಮಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಂ.ಆರ್. ಜಗದೀಶ್

ದಾವಣಗೆರೆ, ಅ.23- ವಿಜ್ಞಾನ ಮತ್ತು ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಮೌಲ್ಯಗಳು ಕಳೆದು ಹೋಗಬಾರದು ಎಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ಜಗದೀಶ್ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ ಧರಾಮ ವಿಜ್ಞಾನ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ `ಖಗೋಳ ವಿಸ್ಮಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆಗಳಲ್ಲ. ಜಗತ್ತಿನ ಕೌತುಕಗಳನ್ನು ನೋಡುವ, ಆನಂದಿಸುವ ಮತ್ತು ಕಣ್ತುಂಬಿಕೊಳ್ಳುವ ಅವಕಾಶಗಳಿಗೆ ಮೌಢ್ಯ ಬಿತ್ತುವ ಜನರು ಬಹುಕಾಲದಿಂದ ಇಂತಹ ವಿಸ್ಮಯಗಳನ್ನು ಜನರು ನೋಡದಂತೆ ದೂರವಿಟ್ಟಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರಿವೀಕ್ಷಕಿ ಮಾಲತಿ ಹಿರೇಗೌಡರ ಮಾತನಾಡಿ, ಜ್ಞಾನ ಹೆಚ್ಚಾದಂತೆ ಮೌಢ್ಯ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಇಂದು ವಿದ್ಯಾವಂತರೇ ಮೌಢ್ಯಕ್ಕೆ ಬಲಿಯಾಗಿ ಮೌಢ್ಯ ಬಿತ್ತುವಿಕೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಕ.ರಾ.ವಿ.ಪ. ಗೌರವಾಧ್ಯಕ್ಷ ಡಾ.ಜಿ.ಬಿ. ರಾಜ್ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜನರಲ್ಲಿ ವೈಜ್ಞಾನಿಕ ಮನೋಭಾವನೆ ಅಭಿವೃದ್ಧಿ ಪಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಜನಸಾಮಾನ್ಯರಿಗೆ ಆಯೋಜಿಸುತ್ತಿದೆ ಎಂದರು. 

ಖಗೋಳ ತಜ್ಞ ಎಂ.ಟಿ. ಶರಣಪ್ಪ `ಖಗೋಳ ವಿಸ್ಮಯ’ ಕುರಿತು ಉಪನ್ಯಾಸ ನೀಡಿದರು. ಧ.ರಾ.ಮ. ಕಾಲೇಜಿನ ಪ್ರಾಚಾರ್ಯೆ ಡಾ. ರೂಪಶ್ರೀ, ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಮಂಜುರಾಜ್, ಬಾಲಭವನ ಸಂಯೋಜಕಿ ಎಸ್.ಬಿ. ಶಿಲ್ಪ, ಎಂ. ಗುರುಸಿದ್ಧಸ್ವಾಮಿ ಇದ್ದರು.

error: Content is protected !!