ಬರುವ ಡಿಸೆಂಬರ್ 20, 21 ಮತ್ತು 22 ರಂದು ಸಕ್ಕರೆಯ ನಾಡು, ಅಕ್ಕರೆಯ ಬೀಡು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ಕನ್ನಡ ಜ್ಯೋತಿ ರಥ ಯಾತ್ರೆಯು ನಾಡಿನಾದ್ಯಂತ ಸಂಚರಿಸುತ್ತಿದ್ದು, ರಥಯಾತ್ರೆಯು ಇಂದು ಮತ್ತು ನಾಳೆ ದಾವಣಗೆರೆ ಜಿಲ್ಲೆಗೆ ಆಗಮಿಸಲಿದೆ.
ಇಂದು ಬೆಳಿಗ್ಗೆ 9.30 ರಿಂದ 11.30ರವರೆಗೆ ಜಗಳೂರಿನಲ್ಲಿ ಮೆರವಣಿಗೆ ನಡೆಯಲಿದ್ದು, ಅಲ್ಲಿಂದ ಬಿಳಿಚೋಡು, ಅಣಜಿ, ಮೆಳ್ಳೇಕಟ್ಟೆ, ಬೇತೂರು ಗ್ರಾಮದ ಇಕ್ಕೆಲಗಳಲ್ಲಿ ಬರುವ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಾಗತಿಸಿ, ಎಲೇಬೇತೂರು ಮೂಲಕ ದಾವಣಗೆರೆ ತಲುಪಲಿದೆ.
ದಾವಣಗೆರೆ ನಗರಕ್ಕೆ ಮಧ್ಯಾಹ್ನ 2 ಗಂಟೆಗೆ ಗಾಂಧಿ ವೃತ್ತದಲ್ಲಿ ಸ್ವಾಗತಿಸಿಲಾಗುವುದು. ಮಹಾನಗರಪಾಲಿಕೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಬಾತಿ ಮಾರ್ಗವಾಗಿ ಹರಿಹರವನ್ನು ಮಧ್ಯಾಹ್ನ 3.30ಕ್ಕೆ ತಲುಪಲಿದೆ. ಹರಿಹರದಲ್ಲಿ ವಾಸ್ತವ್ಯ ಮಾಡಿ ನಾಳೆ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಬೀಳ್ಕೊಡಲಾಗುವುದು.
ರಾಷ್ಟ್ರೀಯ ಹೆದ್ದಾರಿ ಮೂಲಕ ಬಾಡಾ ರಸ್ತೆಯಲ್ಲಿ ಬರುವ ತೋಳಹುಣಸೆ, ವಿಶ್ವವಿದ್ಯಾಲಯ, ಕುರ್ಕಿ ಗ್ರಾಮ ಪಂಚಾಯ್ತಿ, ಅತ್ತಿಗೆರೆ, ರಾಮಗೊಂಡನಹಳ್ಳಿ ಮೂಲಕ ಬಾಡಾ ಗ್ರಾಮವನ್ನು ತಲುಪಿ, ಬಾಡಾ ಗ್ರಾಮದಿಂದ ತಣಿಗೆರೆ ಮೂಲಕ ಸಂತೇಬೆನ್ನೂರಿಗೆ ಬೆಳಿಗ್ಗೆ 10.30ಕ್ಕೆ ತಲುಪಲಿದೆ. ಅಲ್ಲಿಂದ ದೇವರಹಳ್ಳಿ ಮಾರ್ಗವಾಗಿ ಚನ್ನಗಿರಿಗೆ 12 ಗಂಟೆಗೆ ತಲುಪಲಿದೆ. ಚನ್ನಗಿರಿಯಿಂದ ಸೂಳೆಕೆರೆ ಮಾರ್ಗವಾಗಿ ಬಸವಾಪಟ್ಟಣದ ಮೂಲಕ ಹೊನ್ನಾಳಿಯನ್ನು ಮಧ್ಯಾಹ್ನ 3 ಗಂಟೆಗೆ ತಲುಪಲಿದೆ. ಸಂಜೆ 4 ರಿಂದ ಹೊನ್ನಾಳಿಯಿಂದ ನ್ಯಾಮತಿಗೆ 4.30ಕ್ಕೆ ಪ್ರವೇಶ ಮಾಡಲಿದೆ. ನ್ಯಾಮತಿಯಿಂದ ಹೊರಟು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿಗೆ ದಿ.25 ರಂದು ಪ್ರವೇಶಿಸಲಿದೆ.
ರಥಯಾತ್ರೆಯನ್ನು ಸಾರ್ವಜನಿಕರು ಸ್ವಾಗತಿಸಿ, ಬೀಳ್ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮನವಿ ಮಾಡಿದ್ದಾರೆ.