ಜಿ.ಟಿ. ಕಟ್ಟೆ : ವಾಲ್ಮೀಕಿ ಜಯಂತಿಯಲ್ಲಿ ರಾಜನಹಳ್ಳಿ ಶ್ರೀಗಳ ಸಂತಸ
ಮಲೇಬೆನ್ನೂರು, ಅ.22- ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾ ಕಾವ್ಯದಿಂದಾಗಿ ಲೋಕಕಲ್ಯಾಣವಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಜಿ.ಟಿ.ಕಟ್ಟೆ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತನ್ನ ಆತ್ಮ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣಕ್ಕಾಗಿ ರಚಿಸಿದ ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳಿದ್ದು, ಅಧಿಕಾರ, ಆಸ್ತಿಗಾಗಿ ಅಣ್ಣ ತಮ್ಮಂದಿರ ತ್ಯಾಗವನ್ನು ಈ ಮಹಾಕಾವ್ಯ ಜಗತ್ತಿಗೆ ತಿಳಿಸಿದೆ. ಅಧಿಕಾರ, ಆಸ್ತಿಗಾಗಿ ಅಣ್ಣ-ತಮ್ಮಂದಿರ ಜಗಳವನ್ನು ಮಹಾಭಾರತದಲ್ಲಿ ನಾವು ನೋಡಬಹುದು. ಈ ಎರಡೂ ಮಹಾಕಾವ್ಯಗಳು ನಮ್ಮ ಬದುಕನ್ನು ಅರ್ತಪೂರ್ಣಗೊಳಿಸಲು ಜಾಗೃತಿ ಮೂಡಿಸಿವೆ. ಜಗತ್ತಿಗೆ ರಾಮ-ಲಕ್ಷ್ಮಣ-ಸೀತಾ ಮಾತೆಯ ವ್ಯಕ್ತಿತ್ವ ತೋರಿಸಿಕೊಟ್ತ ವಾಲ್ಮೀಕಿ ಅವರ ರಾಮಾಯಣ ಎಲ್ಲರ ಬದುಕಿಗೆ ದಾರಿದೀಪವಾಗಿದೆ. ಅಂತಹ ಮಹಾನ್ ಚೇತನ ವಾಲ್ಮೀಕಿ ಹೆಸರಿನಲ್ಲಿ ನಾಯಕ ಸಮಾಜ ಸಂಘಟನೆ ಹೋರಾಟದ ಮೂಲಕ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಬೇಕಿದೆ ಎಂದು ಸ್ವಾಮೀಜಿ ಯುವಕರನ್ನು ಎಚ್ಚರಿಸಿದರು.
ಶಾಸಕ ಬಿ.ಪಿ. ಹರೀಶ್ ಅವರು ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಶುಭಾಶಯ ಕೋರಿದರು. ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಕೂಡಿ ಬಾಳಿದರೆ ಬದುಕು ಆದರ್ಶ ಎಂಬುದನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ನೋಡಬಹುದೆಂದರು.
ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ ಮಾತನಾಡಿ, ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ಆದರ್ಶ, ಮೌಲ್ಯಗಳನ್ನು ತಿಳಿಸಿಕೊಟ್ಟಿದೆ. ಅಂತಹ ಮಹಾನ್ ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿರುವ ನಾವೇ ಧನ್ಯರು ಎಂದರು.
ಹರಿಹರ ತಾ. ಗ್ರಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ ಮಾತನಾಡಿ, ವಾಲ್ಮೀಕಿ ಅವರು ರಾಮಾಯಣದ ಮೂಲಕ ರಾಮರಾಜ್ಯದ ಪರಿಕಲ್ಪನೆ ತೋರಿಸಿಕೊಟ್ಟಿದ್ದಾರೆ. ಅದನ್ನು ನಾವು ಜಾರಿಗೊಳಿಸಲು ಪ್ರಯತ್ನಿಸೋಣ ಎಂದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಕಾಂಗ್ರೆಸ್ ಮುಖಂಡ ಗುತ್ತೂರು ಹಾಲೇಶ್ಗೌಡ ಮಾತನಾಡಿದರು.
ಗ್ರಾಮದ ಮುಖಂಡರಾದ ಟಿ. ರಾಮಪ್ಪ, ಸಿ. ಹೆಚ್. ಸಿದ್ದಪ್ಪ, ಟಿ. ಬಸಪ್ಪ, ಗ್ರಾ.ಪಂ. ಸದಸ್ಯರಾದ ಮಹೇಶ್, ಬೀರಪ್ಪ, ಎ. ಮಲ್ಲೇಶಪ್ಪ, ಕೆ.ಹೆಚ್. ಸೋಮಶೇಖರಪ್ಪ, ಟಿ. ಉಮ್ಮಣ್ಣ, ಗೌಡ್ರ ರಾಜಪ್ಪ, ಗೌಡ್ರ ಮಲ್ಲೇಶಪ್ಪ, ಗ್ರಾ.ಪಂ. ಮಾಜಿ ಸದಸ್ಯ ಮಲ್ಲಪ್ಪ, ಶಿವಮೂರ್ತೆಪ್ಪ, ಕೊಕ್ಕನೂರಿನ ಡಿ. ಸೋಮಶೇಖರ್, ಹೆಚ್.ನಾಗರಾಜ್, ದಾಸರ ಮಾರುತಿ, ಟಿ. ಹೆಚ್.ಮಲ್ಲೇಶ್ ಟಿ. ಹೆಚ್. ಹನುಮಂತ, ಕೆ.ಎನ್. ಹಳ್ಳಿಯ ಶಿವರಾಜ್, ಜಿಗಳಿ ಕ್ಯಾಂಪಿನ ಪ್ರಸಾದ್ರಾವ್, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದರು.
ಶ್ರೀಮತಿ ವಿದ್ಯಾ ಗಡದ್ ಕಾರ್ಯಕ್ರಮ ನಿರೂಪಿಸಿದರು. ಮಲ್ಲೇಶ್ ಸ್ವಾಗತಿಸಿದರು. ದೇವರಾಜ್ ವಂದಿಸಿದರು.