ನ್ಯಾ. ಸದಾಶಿವ ಆಯೋಗ ಜಾರಿಗಾಗಿ ಆಗ್ರಹಿಸಿ ತಮಟೆ – ಉರುಮೆ ಚಳುವಳಿ

ನ್ಯಾ. ಸದಾಶಿವ ಆಯೋಗ ಜಾರಿಗಾಗಿ ಆಗ್ರಹಿಸಿ ತಮಟೆ – ಉರುಮೆ ಚಳುವಳಿ

ಜಗಳೂರು, ಅ.22- ಶೀಘ್ರದಲ್ಲಿಯೇ ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿಯನ್ನು ಜಾರಿಗೊಳಿಸಲು ಆಗ್ರಹಿಸಿ, ಪರಿಶಿಷ್ಟ ಜಾತಿ ಹೊಲೆಮಾದಿಗರ ಹೋರಾಟ ಸಮಿತಿ ವತಿಯಿಂದ ತಮಟೆ, ಉರುಮೆ ಚಳುವಳಿ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಹಾಕಿ ನಂತರ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರಿಂ ಕೋರ್ಟ್ ಆದೇಶ ಪಾಲನೆಗೆ ಒತ್ತಾಯಿಸಿ, ಘೋಷಣೆ ಕೂಗುತ್ತಾ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ, ನಂತರ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಲಾಯಿತು.

ಮಾದಿಗ ಸಮಾಜದ ಹಿರಿಯ ಮುಖಂಡ ಜಿ.ಹೆಚ್.ಶಂಭುಲಿಂಗಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮಾದಿಗ ಸಂಬಂಧಿತ ಜಾತಿಗಳು ಹಲವು ವರ್ಷಗಳಿಂದ ಒಳಮೀಸಲಾತಿ ಜಾರಿಗೆ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಅಸ್ಪೃಶ್ಯರ ಹಕ್ಕಿನ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.

ಸುಪ್ರೀಂ ಕೋರ್ಟ್ ಆದೇಶವನ್ನು ಹರಿಯಾಣ ಸರ್ಕಾರ ಜಾರಿಗೊಳಿಸಿದಂತೆ ಕರ್ನಾಟದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಹರಿಯಾಣ ಮಾದರಿ ಆದೇಶ ಪಾಲಿಸಬೇಕು. ಇಂದು ಸಾಂಕೇತಿಕವಾಗಿ ತಮಟೆ, ಉರುಮೆ ಚಳುವಳಿ ನಡೆಸಲಾಗಿದೆ. ಶೀಘ್ರ ಒಳಮೀಸಲಾತಿ ಜಾರಿಯಾಗದಿದ್ದರೆ ಛಲ ವಾದಿ ಮಾದಿಗ ಸಮುದಾಯಗಳಿಂದ ಒಕ್ಕೊರಲಿನ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

​ಈ ಸಂದರ್ಭದಲ್ಲಿ ಹೊಲೆ ಮಾದಿಗರ ಒಳಮೀಸಲಾತಿ ಹೋರಾಟ ಸಮಿತಿಯ ವೀರಸ್ವಾಮಿ, ಓಬಣ್ಣ, ಸಿ.ನಿಜಲಿಂಗಪ್ಪ, ಗೌರಿಪುರ, ಕುಬೇರಪ್ಪ, ತುಪ್ಪದಹಳ್ಳಿ ಸಿದ್ದಪ್ಪ, ಸತೀಶ್, ಗುತ್ತಿದುರ್ಗ ರುದ್ರೇಶ್, ಮುನಿಯಪ್ಪ‌, ಮರೇನಹಳ್ಳಿ ಹೊನ್ನೂರಪ್ಪ, ಮಲೆಮಾಚಿಕೆರೆ ಸತೀಶ್, ಕುಬೇಂದ್ರಪ್ಪ, ದುರುಗಣ್ಣ, ತಿಮ್ಮಣ್ಣ, ಶಾಂತಕುಮಾರ್ ಮುಂತಾದವರು ಭಾಗವಹಿಸಿದ್ದರು.

error: Content is protected !!