ಒಳ ಮೀಸಲಾತಿ ಜಾರಿ ಮಾಡಲು ಮಾದಿಗ ಸಮುದಾಯದ ವಕೀಲರ ಆಗ್ರಹ

ಒಳ ಮೀಸಲಾತಿ ಜಾರಿ ಮಾಡಲು ಮಾದಿಗ ಸಮುದಾಯದ ವಕೀಲರ ಆಗ್ರಹ

ದಾವಣಗೆರೆ, ಅ.21- ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಮಾದಿಗ-ಛಲವಾದಿ ಸಮುದಾಯದ ವಕೀಲರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ ಮಾದಿಗ-ಛಲವಾದಿ ಸಮುದಾ ಯದ ವಕೀಲರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಒಳ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಪ್ರತಿಭಟನೆಗಳನ್ನು ನಡೆಸಲಾಯಿತು. ಇದರ ಪ್ರತಿಫಲವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೇಮಿಸಲಾಯಿತು ಎಂದರು.

ವರದಿಯ ಪ್ರಕಾರ ಮಾದಿಗರಿಗೆ (6), ಛಲವಾದಿಗಳಿಗೆ (5) ಸ್ಪಶ್ಯ ಸಮುದಾಯಗಳಿಗೆ (3) ಮತ್ತು ಇತರೆ ಅಲೆಮಾರಿಗಳಿಗೆ (1) ಎಂದು ನಿಗದಿಗೊಳಿಸಿ ಒಳ ಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಈ ವರದಿ ಮೂಲೆ ಗುಂಪಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ ಮೀಸಲಾತಿಗಾಗಿ ಮಾದಿಗ ಹೋರಾಟಗಾರರು ಹೋರಾಟ ನಿಲ್ಲಿಸದೇ ಸುಪ್ರೀಂ ಕೋರ್ಟ್‌ ಮೊರೆ ಹೋದಾಗ  ಸುಪ್ರೀಂ ಕೋರ್ಟ್ ಹೋರಾಟಗಾರರ ಮನವಿಗಳನ್ನು ಮಾನ್ಯಗೊಳಿಸಿ ಜಸ್ಟೀಸ್ ಎ.ಜೆ. ಸದಾಶಿವ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿ ಸುವಂತೆ ಆಯಾ ರಾಜ್ಯಗಳಿಗೆ 2024ರ ಆಗಸ್ಟ್‌ 1ರಂದು ಆದೇಶಿಸಿದೆ ಎಂದು ತಿಳಿಸಿದರು.

ಈ ಮಧ್ಯೆ ವರದಿಯನ್ನು ಪುನರ್ ಪರಿಶೀಲಿಸುವಂತೆ ಕೆಲವು ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಅರ್ಜಿಗಳನ್ನು ಕೋರ್ಟ್‌ ವಜಾಗೊಳಿಸಿದರೂ ಸರ್ಕಾರ ವರದಿ ಜಾರಿ ಮಾಡಲು ವಿಳಂಬ ಮಾಡುತ್ತಿದೆ ಎಂದು ದೂರಿದರು.

ಸರ್ಕಾರವು ಒಳ ಮೀಸಲಾತಿ ವರದಿ ಜಾರಿ ಮಾಡುವಲ್ಲಿ ವಿಳಂಬ ಮಾಡಿದರೇ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನಂತೆ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಅಲ್ಲಿಯ ವರೆಗೆ ರಾಜ್ಯದಲ್ಲಿ ನಡೆಯುವ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ವಕೀಲರಾದ ಬಿ.ಎಂ ಹನುಮಂತಪ್ಪ, ಬಸವರಾಜಪ್ಪ, ಹಲಗೆರೆ ಮಂಜಪ್ಪ, ಕೋಡಿಹಳ್ಳಿ ಹಾಲೇಶ್‌, ಭೈರೇಶ್‌, ಕೆ.ಡಿ.ಮರಿಯಪ್ಪ, ವೈ. ಹನುಮಂತಪ್ಪ, ಡಿ.ಸಿ. ತಿಪ್ಪೇಸ್ವಾಮಿ, ಪರಶುರಾಮ್‌, ಲಿಂಗಮೂರ್ತಿ, ಸುಭಾಷ್‌ ಚಂದ್ರಬೋಸ್‌, ಸುರೇಶ್‌, ನೇತ್ರಾವತಿ, ಅನಿತಾ, ಸ್ವಾತಿ ಮತ್ತಿತರರಿದ್ದರು.

error: Content is protected !!