ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಗೋಪಾಲರಾವ್ ಮಾನೆ ಸಂತಸ
ದಾವಣಗೆರೆ, ಅ. 20- ಬ್ಯಾಂಕುಗಳ ಪೈಪೋಟಿಯ ನಡುವೆಯೂ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆದಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರೂ, ಮರಾಠ ಸಮಾಜದ ಖಜಾಂಚಿಯೂ ಆದ ಗೋಪಾಲರಾವ್ ಮಾನೆ ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ವಿಭಾಗದಲ್ಲಿರುವ ಶ್ರೀ ಕೃಷ್ಣ ಭವಾನಿ ಕಲ್ಯಾಣ ಮಂಟಪದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 29ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತಿ ಹಿಂದುಳಿದ ಐದು ಸಮಾಜಗಳೊಡಗೂಡಿ ಕಳೆದ 29 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಬ್ಯಾಂಕ್ ತನ್ನ ಪ್ರಗತಿಯನ್ನು ಕಾಯ್ದು ಕೊಂಡು ಬಂದಿದ್ದು, ಪ್ರಸಕ್ತ ಸಾಲಿನಲ್ಲೂ `ಎ’ ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ ಮುಂದುವರೆದಿದೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.
2024, ಮಾರ್ಚ್ ಅಂತ್ಯಕ್ಕೆ 2891 ಸದಸ್ಯರಿರುವ ಈ ಬ್ಯಾಂಕ್, 1.42 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 21 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಇದು ಕಳೆದ ಸಾಲಿಗಿಂತ ಶೇ. 35.55ರಷ್ಟು ಹೆಚ್ಚಾಗಿರುತ್ತದೆ. ಎಲ್ಲಾ ಠೇವಣಿ ದಾರರಿಗೂ 5 ಲಕ್ಷ ರೂ.ಗಳವರೆಗೆ ವಿಮೆ ಮಾಡಿಸಲಾಗಿದೆ.
ಸದಸ್ಯರ ಅಗತ್ಯಕ್ಕನುಗುಣವಾಗಿ 10 ಕೋಟಿ ರೂ. ಸಾಲ-ಸೌಲಭ್ಯ ಒದಗಿಸುವುದರ ಮೂಲಕ ಅವರ ಆರ್ಥಿಕ ಸಮಸ್ಯೆಗೆ ಸ್ಪಂದಿಸಲಾಗಿದೆ. 34 ಲಕ್ಷ ರೂ. ಲಾಭ ಗಳಿಸಿದ್ದು, ಮುಂಗಡ ಆದಾಯ ತೆರಿಗೆ ಪಾವತಿ ನಂತರ 28 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅವರು ಅಂಕಿ-ಅಂಶಗಳೊಂದಿಗೆ ಬ್ಯಾಂಕಿನ ಪ್ರಗತಿಯನ್ನು ಸಭೆಗೆ ವಿವರಿಸಿದರು.
ಷೇರುದಾರರಿಗೆ ಶೇ. 12ರಂತೆ ಲಾಭಾಂಶ ವಿತರಿಸಲು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೋಪಾಲರಾವ್ ಮಾನೆ ಅವರು ಷೇರುದಾರರ ಹರ್ಷೋದ್ಘಾರದ ನಡುವೆ ಘೋಷಿಸಿದರು.
ನಿವ್ವಳ ಎನ್‌ಪಿಎ ಶೇ. -1.77 ಹಾಗೂ ಸಮಗ್ರ ಅನು ತ್ಪಾದಕ ಆಸ್ತಿ ಶೇ. 2.57 ಇದ್ದು, ಈ ಪ್ರಗತಿಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಇದೆ ಎಂದು ಅವರು ಕೃತಜ್ಞತಾಭಾವದಿಂದ ಹೇಳಿದರು.
ಮುಂಬರುವ ದಿನಗಳಲ್ಲಿ ಬ್ಯಾಂಕಿನ ನೂತನ ಕಟ್ಟಡ ನಿರ್ಮಿಸುವುದು, ಹೊಸ ಶಾಖೆಗಳನ್ನು ತೆರೆಯುವುದು, ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ಸಲ್ಲಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಅನುತ್ಪಾದಿತ ಆಸ್ತಿ ಪ್ರಮಾಣ ಕಡಿಮೆ ಮಾಡುವ ಕಡೆ ನಿಗಾ ವಹಿಸುವುದು ಆಡಳಿತ ಮಂಡಳಿಯ ದೃಢ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದರು.
ದೂಡಾ ಮಾಜಿ ಅಧ್ಯಕ್ಷರೂ, ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಯಶವಂತರಾವ್ ಜಾಧವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳನ್ನು ಅಳವಡಿಸಿಕೊಂಡು, ಲಾಭ ಗಳಿಕೆಯಲ್ಲಿ ಮುನ್ನಡೆದಿರುವ ಬ್ಯಾಂಕಿನ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಮಾಜಿ ಮಹಾಪೌರರೂ, ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಎಂ.ಎಸ್. ವಿಠ್ಠಲ್ ಮಹೇಂದ್ರಕರ್ ಮಾತನಾಡಿ, ತಾಂತ್ರಿಕತೆಯಲ್ಲೂ ಮುಂದುವರೆದಿರುವ ಬ್ಯಾಂಕ್, ಅನೇಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿರುವುದು ತಮಗೆ ಸಂತಸವನ್ನುಂಟು ಮಾಡಿದೆ ಎಂದರು.
ಬ್ಯಾಂಕಿನ ಮತ್ತೋರ್ವ ಮಾಜಿ ಅಧ್ಯಕ್ಷರೂ, ದೂಡಾ ಮಾಜಿ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್ ಮಾತನಾಡಿ, `ಎ’ ವರ್ಗೀಕರಣದಲ್ಲಿ ಆಡಿಟ್ ವರದಿ ಹೊಂದಿರುವುದು ಉತ್ತಮ ಬೆಳವಣಿಗೆ ಎಂದರು. ಅಲ್ಲದೇ, ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ಮಂಡಳಿ ಪಣತೊಟ್ಟು ಕ್ರಿಯಾಶೀಲರಾಗುವಂತೆ ಕಿವಿಮಾತು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ಗಿರಿಧರ್ ಡಿ. ಮೆಹರ್ವಾಡೆ ಮಾತನಾಡಿ, ಬ್ಯಾಂಕಿನ ಪ್ರಗತಿಗೆ ಆಡಳಿತ ಮಂಡಳಿಯ ದಕ್ಷತೆ, ಸಿಬ್ಬಂದಿ ವರ್ಗದವರ ಇಚ್ಛಾಶಕ್ತಿ, ಗ್ರಾಹಕರು-ಷೇರುದಾರರ ನಂಬಿಕೆ, ಸಾರ್ವಜನಿಕರ ವಿಶ್ವಾಸಾರ್ಹತೆ ಕಾರಣ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಲೆಕ್ಕ ಪರಿಶೋಧನೆಯಾದ ಲಾಭ-ನಷ್ಟ, ಅಢಾವೆ ಪತ್ರಿಕೆ ಮಾಹಿತಿಯನ್ನು ವೃತ್ತಿಪರ ನಿರ್ದೇಶಕ ರಾಜು ವಿ. ಮಹೇಂದ್ರಕರ್ ಸಭೆಯ ಗಮನಕ್ಕೆ ತಂದರು. ಲಾಭ ವಿಲೇವಾರಿ ವಿಷಯವನ್ನು ನಿರ್ದೇಶಕ ಆನಂದ ಡಿ. ಸಫಾರೆ ಸಭೆಯ ಮುಂದಿಟ್ಟರು. ಶಾಸನಬದ್ಧ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತಂತೆ ನಿರ್ದೇಶಕ ವಿ. ಮನೋಹರ್ ವಿವರಿಸಿದರು. ಮುಂಗಡ ಪತ್ರಕ್ಕಿಂತ ಹೆಚ್ಚುವರಿಯಾದ ಖರ್ಚುಗಳ ವಿವರವನ್ನು ನಿರ್ದೇಶಕ ಬಾಬುರಾವ್ ಎಸ್. ಸಾಳಂಕಿ ನೀಡಿದರು. ಮುಂಬರುವ ವರ್ಷದ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಕರಾದ ಶ್ರೀಮತಿ ರೇಣುಕಾ ಬಾಯಿ ಓದಿದರು. ಭತ್ಯೆಗಳ ಮಾಹಿತಿಯನ್ನು ನಿರ್ದೇಶಕ ಗಣೇಶ ಪಿ. ಕ್ಷೀರಸಾಗರ ಸಭೆಗೆ ನೀಡಿದರು.
ನಿರ್ದೇಶಕರುಗಳಾದ ಆರ್.ಜಿ. ಸತ್ಯನಾರಾಯಣ, ಎಸ್.ಕೆ. ಮಧುಕರ್, ಆರ್. ವಿಠ್ಠಲ್, ಶ್ರೀಮತಿ ಅನಿತಾಬಾಯಿ ಮಾಲತೇಶ್ ರಾವ್ ಜಾಧವ್, ಡಾ. ಎಸ್. ರಜನಿ, ಎ.ಸಿ. ರಾಘವೇಂದ್ರ ಮೊಹರೆ, ಜಿ. ಯಲ್ಲಪ್ಪ ಅವರುಗಳು ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಸದಸ್ಯರುಗಳಾದ ರಮೇಶ್ ಪಿ. ಕಾಟ್ವೆ, ಎಸ್.ಪಿ. ಸುರೇಶ್ ರಾವ್ ಮತ್ತು ಇತರರು ಬ್ಯಾಂಕಿನ ಅಭಿವೃದ್ಧಿ ಕುರಿತಂತೆ ಸಲಹೆ-ಸೂಚನೆ ನೀಡಿದರು.
ಶ್ರೀಮತಿ ಮಂಜುಳಾ ಪ್ರಾರ್ಥಿಸಿದರು. ನಿರ್ದೇಶಕ ಬಾಬು ವಂದಿಸಿದರು. ವೃತ್ತಿಪರ ನಿರ್ದೇಶಕ ರಾಜು ಎಲ್. ಬದ್ದಿ ಅವರು ಕಾರ್ಯಕ್ರಮ ನಿರೂಪಿಸಿದರು.
ವ್ಯವಸ್ಥಾಪಕ ನಾಗರಾಜ್ ಗೌಡನಕಟ್ಟಿ, ಸಹಾಯಕ ವ್ಯವಸ್ಥಾಪಕ ಅನಿಲ್ ಟಿ. ಮಾಳದಕರ್, ಲೆಕ್ಕಾಧಿಕಾರಿಗಳಾದ ಶ್ರೀಮತಿ ಎಂ.ಸಿ. ಮಂಜುಳ, ಎಂ. ನವೀನ್‌ಕುಮಾರ್, ಸಹಾಯಕರುಗಳಾದ ವಿನಾಯಕ್ ಎನ್. ಕಾಟ್ವೆ, ಶ್ರೀಮತಿ ನಿರ್ಮಲಾ, ಸುಜಿತ್ ಕಾಟ್ವೆ, ಕೆ.ಟಿ. ಅಂಕುಶ, ಕಿರಣ್ ವೈ. ಚವ್ಹಾಣ್, ಸಾಲ ವಸೂಲಾತಿ ಅಧಿಕಾರಿ ಎಂ. ದೇವೇಂದ್ರರಾವ್, ನಿತ್ಯನಿಧಿ ಸಂಗ್ರಾಹಕರುಗಳಾದ ಕೆ. ರಾಘವೇಂದ್ರ, ಮಹೇಶ್ ಸೋಳಂಕಿ, ಗಣೇಶ್ ರಾವ್ ಪವಾರ್, ಆರ್. ಹನುಮಂತಪ್ಪ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.