ಜಗಳೂರು: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ದೇವೇಂದ್ರಪ್ಪ
ಜಗಳೂರು, ಆ. 17- ಜನ ಮಾನಸದಲ್ಲಿ ರಾಮಾಯಣ, ಮಾಹಾಭಾರತ ಮಹಾ ಕಾವ್ಯಗಳು ಜೀವಂತವಾಗಿವೆ ಎಂದು ಶಾಸಕ ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ 3.75 ಕೋಟಿ ರೂ.ವೆಚ್ಚದ ನೂತನ ವಾಲ್ಮೀಕಿ ಭವನದಲ್ಲಿ ತಾಲ್ಲೂಕು ಆಡಳಿತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಪಂ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ಭವನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾಯಣವು ದೇಶ-ವಿದೇಶಗಳ ಹಲವು ಭಾಷೆಗಳಿಗೆ ತರ್ಜುಮೆಯಾಗಿರುವುದ ರಿಂದಲೇ ಅದು ಎಷ್ಟು ಶ್ರೇಷ್ಠ ಎಂಬುದು ತಿಳಿಯುತ್ತದೆ. ದಾರ್ಶನಿಕರ ಜಯಂತಿಗಳನ್ನು ಎಲ್ಲರೂ ಸೇರಿ ಹಬ್ಬಗಳಂತೆ ಆಚರಿಸಿದಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಸರ್ಕಾರಗಳು ಇರುವುದು ಜನರ ಸೇವೆಗಾಗಿ, ಯಾವ ಸರ್ಕಾರಗಳೂ ಮುಖ್ಯವಲ್ಲ. ಜನರಿಗಾಗಿ ಸರ್ಕಾರ ಏನು ಮಾಡಿದೆ ಎಂಬುವುದು ಮುಖ್ಯವಾಗುತ್ತದೆ. ಹಾಗೆಯೇ ಹಿಂದಿನ ಆಡಳಿತದ ಅವಧಿಯಲ್ಲಿ 3.75 ಕೋಟಿ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ಬೃಹತ್ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣದ ಶ್ರೇಯ ಮಾಜಿ ಶಾಸಕ ರಾಮಚಂದ್ರಪ್ಪನವರಿಗೆ ಸಲ್ಲುತ್ತದೆ. ಇಂದು ಭವನವನ್ನು ಅವರ ಜೊತೆಗೂಡಿ ಉದ್ಘಾಟನೆ ಮಾಡಿರುವೆ ಎಂದು ತಿಳಿಸಿದರು.
ಮಾಜಿ ಶಾಸಕ ರಾಮಚಂದ್ರಪ್ಪ ಮಾತ ನಾಡಿ, ನನ್ನ ಅವಧಿಯಲ್ಲಿ ಬೃಹತ್ ವಾಲ್ಮೀಕಿ ಭವನಕ್ಕೆ ಮುಂದಾಗಿದ್ದು, ಇಂದು ಸರ್ಕಾರ ಬದಲಾದರೂ ಪ್ರೋಟೋಕಾಲ್ ಬದಿಗಿಟ್ಟು ಭವನದ ಉದ್ಘಾಟನೆ ನನ್ನ ಜೊತೆಗೂಡಿ ಮಾಡಿದ್ದು ಸಂತಸ ತಂದಿದೆ ಎಂದರು.
ಈ ಹಿಂದೆ ಇಂತಹ ಅವಮಾನವನ್ನು ಕೆಲವರು ಮಾಡಿದ್ದರು. ಆದರೆ ಶಾಸಕ ದೇವೇಂದ್ರಪ್ಪನವರ ದೊಡ್ಡಗುಣ ಇಲ್ಲಿ ನಾನು ಬಂದು ಭವನ ಉದ್ಘಾಟನೆ ಮಾಡುವುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕರನ್ನು ಪ್ರಶಂಸಿಸಿ ದರು. ಸುಸಜ್ಜಿತ ಕಟ್ಟಡವನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗಿದೆ. ಇದು ಬರೀ ವಾಲ್ಮೀಕಿ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮಾಜದವರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಮುಖಂಡರಾದ ಕೆ.ಪಿ. ಪಾಲಯ್ಯ ಮಾತನಾಡಿ, ನಾಯಕ ಸಮಾಜದವರು ಬರೀ ದ್ವೇಷ ಅಸೂಯೇಯ ಹಿಂದೆ ಓಡದೇ ವಾಲ್ಮೀಕಿ ಮಹಾ ಗುರುಗಳ ಆದರ್ಶ ಗುಣಗಳನ್ನು ಅನುಸರಿಸಬೇಕು ಎಂದರು.
ಹಿಂದಿನ ಶಾಸಕ ರಾಮಚಂದ್ರಪ್ಪನವರ ಅವಧಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ಹಂತದಲ್ಲಿತ್ತು. ಇದನ್ನು ಮನಗಂಡ ಶಾಸಕ ದೇವೇಂದ್ರಪ್ಪ ಅವರು ಲೋಕಾರ್ಪಣೆಗೆ ಮಾಜಿ ಶಾಸಕ ರಾಮಚಂದ್ರ ಅವರೂ ಬರಲಿ ಎಂದು ಒಂದು ಗಂಟೆಗೂ ಹೆಚ್ಚು ಕಾಲ ನೂತನ ಭವನದ ಮುಂದೆ ಕಾದು ಕುಳಿತು, ಅವರು ಆಗಮಿಸಿದ ನಂತರ ಅವರ ಜೊತೆಗೂಡಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷೆ ಲೋಕಮ್ಮ, ಸದಸ್ಯರಾದ ಸರೋಜಮ್ಮ, ಲಲಿತಮ್ಮ, ತಿಪ್ಪೇ ಸ್ವಾಮಿ, ಮಹಮದ್ ಆಲಿ, ಶಕೀಲ್ ಅಹಮದ್, ರಮೇಶ್, ವಿಶಾಲಾಕ್ಷಿ, ಪಾಪಲಿಂಗಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ಬಸವರಾಜ್, ಮುಖಂಡ ರಾದ ಕಲ್ಲೇಶ್ರಾಜ್ ಪಟೇಲ್, ಬಿ. ಮಹೇಶ್ವ ರಪ್ಪ, ಶ್ರೀ ಮತಿ ವೀಣಾ, ಬಿಇಓ ಹಾಲಮೂರ್ತಿ, ತಾಪಂ ಇಓ ಕೆಂಚಪ್ಪ ಮುಂತಾದವರು ಇದ್ದರು.