ಹರಿಹರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಇಓ ಎಸ್.ಪಿ. ಸುಮಲತ ನಿರ್ದೇಶನ
ಹರಿಹರ, ಅ.15- ರೈತರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗ ದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸುವಂತೆ ತಾ.ಪಂ. ಇಓ ಎಸ್.ಪಿ. ಸುಮಲತ ತಿಳಿಸಿದರು.
ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಉಪಯುಕ್ತವಾಗುವಂತಹ ಸರ್ಕಾರದ ಸೌಲಭ್ಯಗಳನ್ನು ಸರಿಯಾದ ಸಮಯದಲ್ಲಿ ತಲುಪಿಸಬೇಕು. ಅಡಿಕೆ ಜೊತೆಗೆ ಇತರೆ ಬೇಳೆಕಾಳುಗಳ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ರೈತ ಸಮುದಾಯಕ್ಕೆ ತಿಳಿಸಬೇಕು. ರೈತರಿಗೆ ಬರಗಾಲದ ಸಮಯದಲ್ಲಿ ಆಗಿರುವ ಬೆಳೆಹಾನಿ ಪರಿಹಾರದ ಮೊತ್ತವನ್ನು ಆದಷ್ಟು ಬೇಗನೆ ನೀಡುವುದಕ್ಕೆ ಮುಂದಾಗಬೇಕು.ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ದಾಸ್ತಾನು ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು.
ಕೃಷಿ ಹೊಂಡಗಳನ್ನು ಹೆಚ್ಚು ನಿರ್ಮಾಣ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಭೆಯನ್ನು ಏರ್ಪಡಿಸಿ ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ, ಅರಿವು ಮೂಡಿಸಬೇಕು ಎಂದು ಹೇಳಿದರು.
ಕೊಕ್ಕನೂರು ಗ್ರಾಮದಲ್ಲಿ ಡಾ. ಅರ್ಶಿತ್ ಎಂಬ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ ಮತ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡಿದ್ದು, ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ, ಕ್ಷಯ ರೋಗದಿಂದ ಬಳಲುತ್ತಿರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಬೇಕು. ತಾಲ್ಲೂಕಿನಲ್ಲಿ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಕಡಿಮೆ ಪ್ರಮಾಣದಲ್ಲಿ ಬಂದಿದ್ದು, ಮಕ್ಕಳಿಗೆ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಮೂಡಿಸುವಲ್ಲಿ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಹೇಳಿದರು.
ಪಶು ಇಲಾಖೆಯ ನೂತನ ಕಟ್ಟಡದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ಸಲ್ಲಿಸಿ, ಆರು ತಿಂಗಳು ಕಳೆದರೂ ಕಾಮಗಾರಿ ಆರಂಭಿಸದೇ ಇರುವುದರಿಂದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು, ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಹೇಳಿದರು.
ಬಿ.ಸಿ.ಎಂ. ಇಲಾಖೆ ಎಇಇ ಆಸ್ಮಾಬಾನು, ಶಿಕ್ಷಣ ಇಲಾಖೆ ಬಿ.ಆರ್.ಸಿ ಕೃಷ್ಣಪ್ಪ, ಸಿಡಿಪಿಓ ಇಲಾಖೆ ಎಇಇ ಪೂರ್ಣಿಮಾ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಹನುಮನಾಯ್ಕ್, ಬೆಸ್ಕಾಂ ಇಲಾಖೆ ಎಇಇ ಮಾರ್ಕಂಡೇಯ, ಅರಣ್ಯ ಇಲಾಖೆ ಎಇಇ ಅಮೃತ, ಆರೋಗ್ಯ ಇಲಾಖೆ ಅಧಿಕಾರಿ ಪ್ರಶಾಂತ್, ಪಶು ಇಲಾಖೆ ಎಇಇ ಸಿದ್ದೇಶ್ ತಮ್ಮ ಇಲಾಖೆಗಳ ಪ್ರಗತಿ ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಜಿಪಂ ಇಲಾಖೆ ಲೆಕ್ಕಾಧಿಕಾರಿ ಎಂ.ಎ. ವೆಂಕಟೇಶ್, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಕಾರ್ಮಿಕ ಇಲಾಖೆ ಎಇಇ ಕವಿತಾ, ಪಶು ಇಲಾಖೆ ಸಿದ್ದೇಶ್, ತೋಟಗಾರಿಕೆ ಇಲಾಖೆ ಎಇಇ ಶಶಿಧರಯ್ಯ, ಕೆ.ಆರ್.ಡಿ.ಎಲ್ ಇಲಾಖೆ ಸಂಗಮೇಶ್, ಅಕ್ಷರ ದಾಸೋಹ ಇಲಾಖೆ ವೀರೇಶ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಎಇಇ ರಾಮಕೃಷ್ಣಪ್ಪ, ಕೆ.ಎಸ್.ಆರ್.ಟಿ.ಸಿ. ಹನುಮಂತಪ್ಪ, ತಾಪಂ ಕಚೇರಿಯ ಲಿಂಗರಾಜ್, ಸ್ವಪ್ನ, ಸಲಿಂ ಆಹ್ಮದ್, ಮಹೇಶ್, ವಾಸುದೇವ, ಮಹಮ್ಮದ್ ಅಲಿ ಮತ್ತಿತರರು ಹಾಜರಿದ್ದರು.