ದಾವಣಗೆರೆ, ಅ.15- ಹುಬ್ಬಳ್ಳಿ ಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗಲಭೆ ಸೃಷ್ಟಿಸಿದ್ದ ದೇಶ ದ್ರೋಹಿಗಳ ಮೇಲಿನ ಪ್ರಕರಣವನ್ನು ಹಿಂಪಡೆದಿರುವುದು ಖಂಡನೀಯ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಕೋರರ ಪ್ರಕರಣದ ಬಗ್ಗೆ ಎನ್ಐಎ ಇಲಾಖೆ ತನಿಖೆ ನಡೆಸುತ್ತಿದ್ದರೂ ಸರ್ಕಾರ ತೆಗೆದುಕೊಂಡ ನಿರ್ಣಯ ಸರಿಯಲ್ಲ ಎಂದು ದೂರಿದರು.
ಸರ್ಕಾರವು ಕನ್ನಡಪರ ಸಂಘಟನೆ, ದೇಶ ಭಕ್ತ ಸಂಸ್ಥೆಗಳು ಹಾಗೂ ರೈತ ಸಂಘಟನೆ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ರದ್ದುಗೊಳಿಸುವ ಕಾರ್ಯ ಮಾಡಬೇಕೇ ಹೊರತು ಗಲಭೆಕೋರರ ಮೊಕದ್ದಮೆ ಹಿಂಪಡೆಯಬಾರದು ಎಂದರು.
ಬಿಜೆಪಿಯು ಅಲ್ಪ ಸಂಖ್ಯಾತರ ವಿರೋಧಿಯ, ದೇಶ ಭಕ್ತ ಸಂಸ್ಥೆಗಳ ಪರವಿದೆ. ಹಾಗಾಗಿ ದೇಶ ವಿರೋಧಿಗಳು ಮತ್ತು ಭಯೋತ್ಪಾದಕರ ವಿರುದ್ಧ ನಾವು ತೊಡೆ ತಟ್ಟಿ ಮಾತನಾಡುತ್ತೇವೆ ಎಂದರು.
ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿ ಸೂಪರ್ ಸಿಎಂ ಆಗಿ ವರ್ತನೆ ಮಾಡುತ್ತಿದ್ದಾರೆ. ಟ್ರಸ್ಟಿಗೆ ಕಾನೂನು ಪ್ರಕಾರ 5 ಎಕರೆ ಭೂಮಿ ನೀಡಿರು ವುದಾಗಿ ತಿಳಿಸಿದ ಮೇಲೆ, ಆ ಜಮೀ ನನ್ನು ಯಾಕೆ ಹಿಂದಿರುಗಿಸಿದ್ದಾರೆ. ತಪ್ಪೇ ಮಾಡಿರದಿದ್ದರೇ ಜಮೀನು ಯಾಕೆ ವಾಪಸ್ ಮಾಡಬೇಕಿತ್ತು ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ಹಾಗೂ ಗೊಂದಲವಿದ್ದ ಕಾರಣ ನೂರಕ್ಕೆ ನೂರರಷ್ಟು ಕ್ಷಿಪ್ರಕ್ರಾಂತಿ ಆಗಲಿದೆ. ಪಕ್ಷದಲ್ಲಿ ಹಾಗೇನಾದರೂ ಆದಲ್ಲಿ ಮುಖ್ಯಮಂತ್ರಿ ಆಗಬೇಕು ಎಂಬ ಹಗಲುಗನಸು ಕಂಡ ಅವರು, ಭೂಮಿ ವಾಪಸ್ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಯಾರ ಕಪಿಮುಷ್ಟಿಯಲ್ಲೂ ಇಲ್ಲ. ಆ ತರ ಯಾರಾದರು ತಿಳಿದುಕೊಂಡಿದ್ದರೆ ಅದು ಅವರ ಭ್ರಮೆ.
– ಮಾಡಾಳ್ ಮಲ್ಲಿಕಾರ್ಜುನ್.
ಯುಬಿಡಿಟಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50ರಷ್ಟು ಸೀಟುಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ.
– ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ.
ಸಿಎಂ ಸಿದ್ದರಾಮಯ್ಯ ಅವರಿಗೆ ಕುರ್ಚಿ ಕಂಟಕ ಬಂದಿದ್ದರಿಂದ ಜಾತಿ ಜನ ಗಣತಿ ಮುಂದೆ ತರುವ ಮೂಲಕ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳ ಬಳಿಕ ಈ ವಿಚಾರ ಚರ್ಚಿಸುತ್ತಿರುವುದು ಯಾಕೆ? ಅಂದೇ ಮಾಡಬಹುದಿತ್ತಲ್ಲ ಎಂದರು.
ಬಿಜೆಪಿ ಮುಖಂಡ ಮಾಡಾಳ್ ಮಲ್ಲಿ ಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಲ್ಪ ಸಂಖ್ಯಾತರ ತುಷ್ಟೀಕರಣ ಮುಗಿಲು ಮುಟ್ಟಿದೆ. ಹುಬ್ಬಳ್ಳಿ ಗಲಭೆಕೋರರ ಮೊಕದ್ದಮೆ ಹಿಂಪಡೆದಿರುವುದು ರಾಜ್ಯದ ಜನರೇ ಖಂಡಿಸುವ ವಿಚಾರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರವು ಆಡಳಿತವನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಕಾರ್ಯಕರ್ತರು ಜನ ಬೀದಿಗಿಳಿದು ಅಹೋರಾತ್ರಿ ಧರಣಿ ಮಾಡಲು ತಯಾರಿದ್ದಾರೆ ಎಂದು ತಿಳಿಸಿದರು.
ಈ ವೇಳೆ ರೈತ ಮೋರ್ಚಾದ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ವಾಟರ್ ಮಂಜುನಾಥ್, ಚನ್ನಗಿರಿ ಮಲ್ಲಿಕಾರ್ಜುನ್ ಇತರರು ಗೋಷ್ಠಿಯಲ್ಲಿದ್ದರು.