ಹರಪನಹಳ್ಳಿ, ಅ. 14 – ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದಲ್ಲಿ ಭಂಡಾರದ ಒಡೆಯ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಟಗರು ಕಾಳಗ ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು.
ಮರಿಟಗರು, 2 ಹಲ್ಲಿನ ಟಗರು, 4 ಮತ್ತು 8 ಹಲ್ಲಿನ ಟಗರುಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಯಿತು. ಟಗರು ಕಾಳಗಕ್ಕೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ಪುತ್ರ ಗೌತಮ್ ಪ್ರಭು ಚಾಲನೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಕುರಿ ಕೇವಲ ಆಹಾರದ ವಸ್ತು ಅಲ್ಲ, ಅದು ತನ್ನಲ್ಲಿರುವ ಸಾಮರ್ಥ್ಯವನ್ನು ತೋರಿಸಲು ಇಂತಹ ಕ್ರೀಡೆಗಳು ಉಪಯುಕ್ತವಾಗಲಿವೆ ಎಂದರು.
ಹರಪನಹಳ್ಳಿ ಪುರಸಭೆ ಸದಸ್ಯರಾದ ಉದ್ದಾರ ಗಣೇಶ, ಲಾಟಿ ದಾದಾಪೀರ್, ವಕೀಲ ಟಿ.ಎಚ್.ಎಂ. ಮಂಜುನಾಥ, ಅಹಿಂದ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ದಾದಾಪುರ ಶಿವಪುತ್ರ, ಶಾಸಕರ ಆಪ್ತ ಸಹಾಯಕ ಮತ್ತೂರು ಬಸವರಾಜ ಆಗಮಿಸಿದ್ದರು.
ಮರಿಕುರಿ ಕಾಳಗದಲ್ಲಿ ಹರಾಳು ಗ್ರಾಮದ ಪರಶುರಾಮ ಎಂಬ ಟಗರು ಪ್ರಥಮ ಬಹುಮಾನ ಪಡೆದುಕೊಂಡರೆ ಹರಪನ ಹಳ್ಳಿಯ ಕೋಟೆ ಆಂಜನೇಯ ದ್ವಿತೀಯ ಬಹುಮಾನ ಪಡೆಯಿತು, 2 ಹಲ್ಲಿನ ಕುರಿ ಕಾಳಗದಲ್ಲಿ ಹ್ಯಾರಡ ಬೀರಲಿಂಗೇಶ್ವರ ಪ್ರಥಮ, ನೀಲಗುಂದ ಕಾಳಿ ಗ್ರೂಪ್ ದ್ವಿತೀಯ ಹಾಗೂ 4 ಹಲ್ಲಿನಲ್ಲಿ ಹರಪನಹಳ್ಳಿಯ ಇಂದ್ರ-ಚಂದ್ರ ಪ್ರಥಮ, ಚಿತ್ರದುರ್ಗದ ಕದಂಬ ದ್ವಿತೀಯ, 8 ಹಲ್ಲಿನಲ್ಲಿ ಹರಪನಹಳ್ಳಿಯ ಗಬ್ಬರ್‍ಸಿಂಗ್ ಹಾಗೂ ಸಮಾಜಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡವು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬಣಕಾರ ಗುಡ್ಡಪ್ಪ, ಟಿ.ಬಸವರಾಜ, ಎಚ್. ನಾಗೇಂದ್ರ, ಎ. ಜ್ಯೋತೇಶ, ಎಚ್. ನಾಗಪ್ಪ, ಪಿ. ಭರಮಪ್ಪ, ವಿ. ದುರುಗಪ್ಪ, ಆಯೋಜಕರಾದ ಎ. ಹಾಲೇಶ, ಕೆ. ಕರಿಯಲ್ಲಪ್ಪ, ಯೋಗೇಶ, ನಿಂಗರಾಜ, ಕಿರಣ್, ವಿನಾಯಕ, ಬಸವರಾಜ, ಗಂಗಾಧರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.