ಮಲೇಬೆನ್ನೂರು, ಅ.13- ಗರ್ಭಿಣಿಯರಲ್ಲಿ ಶೇ. 60ರಷ್ಟು ಮಹಿಳೆಯರು ರಕ್ತಹೀನತೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಅವರು ವೈದ್ಯರ ಸಲಹೆ ಮೇರೆಗೆ ಔಷಧಿ ತೆಗೆದುಕೊಂಡು ಹಿಮೋಗ್ಲೋಬಿನ್ ಹೆಚ್ಚಿಸಿಕೊಂಡು ಸ್ವಾಸ್ಥ್ಯ ವಾಗಿರುವಂತೆ ವೈದ್ಯಾಧಿಕಾರಿ ಡಾ. ಪ್ರಶಾಂತ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಗರ್ಭಿಣಿಯರು ಕಬ್ಬಿಣಾಂಶದ ಮಾತ್ರೆಗಳನ್ನು ಊಟದ ನಂತರ ನುಂಗುತ್ತಾರೆ. ಈ ರೀತಿ ನುಂಗುವುದರಿಂದ ಮಾತ್ರೆಯಲ್ಲಿರುವ ಕಬ್ಬಿನಾಂಶ ಹೀರುವಿಕೆ ಕಡಿಮೆಯಾಗುತ್ತದೆಯೇ ಹೊರತು ವೃದ್ಧಿಯಾಗುವುದಿಲ್ಲ. ಆದ್ದರಿಂದ ಊಟವಾದ ತಾಸಿನ ನಂತರ ಕಬ್ಬಿಣಾಂಶದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು.
ಮಾತ್ರೆ ನುಂಗಿದಾಗ ಹಾಲು ಹಾಗೂ ಬೇಕರಿ ಪದಾರ್ಥಗಳನ್ನು ಸೇವಿಸಬಾರದು. ಈ ರೀತಿ ಪಾಲನೆ ಮಾಡುವುದರಿಂದ ಕಬ್ಬಿನಾಂಶ ಇರುವಿಕೆ ಕಡಿಮೆಯಾಗಿ ರಕ್ತ ವೃದ್ಧಿಯಾಗುತ್ತದೆ. ಇದರಿಂದ ತಾಯಿ ಹಾಗೂ ಮಗುವಿನ ಮರಣ ತಡೆಗಟ್ಟಬಹುದು ಎಂದು ಡಾ. ಪ್ರಶಾಂತ್ ಹೇಳಿದರು.
ತಾಲ್ಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಗರ್ಭಿಣಿ ಅವಧಿಯಲ್ಲಿ ಆಹಾರಕ್ಕೆ ಸರಿಸಮಾನವಾಗಿ ಅಯೋಡಿನ್ ಉಪ್ಪನ್ನು ಬಳಸಬೇಕು. ಇದರಿಂದ ದಿನ ತುಂಬದ ಹೆರಿಗೆ ತಪ್ಪಿಸಬಹುದು ಹಾಗೂ ಹುಟ್ಟುವ ಮಕ್ಕಳು ಬುದ್ಧಿಮಾಂಧ್ಯರಾಗದಂತೆ ತಡೆಗಟ್ಟಬಹುದೆಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವಿಮಲ ಶೀಲಾ, ನಳಿನ, ಆಶಾ ಕಾರ್ಯಕರ್ತೆಯರು ಮತ್ತು ಗರ್ಭಿಣಿಯರು ಇದ್ದರು.