`ಯುಬಿಡಿಟಿ ಉಳಿಸಿ’ಹೋರಾಟ: ದಾವಣಗೆರೆ ಬಂದ್ ಪ್ರಚಾರಕ್ಕೆ ಚಾಲನೆ

`ಯುಬಿಡಿಟಿ ಉಳಿಸಿ’ಹೋರಾಟ: ದಾವಣಗೆರೆ ಬಂದ್ ಪ್ರಚಾರಕ್ಕೆ ಚಾಲನೆ

ದಾವಣಗೆರೆ, ಅ.8- ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50 ರಷ್ಟು ಸೀಟುಗಳನ್ನು ಪೇಮೆಂಟಿಗೆ ಮಾರಾಟ ಮಾಡುತ್ತಿರುವುದರ ವಿರುದ್ಧ ಇದೇ ದಿನಾಂಕ 16 ರಂದು ನಡೆಸಲುದ್ದೇಶಿಸಿರುವ ದಾವಣಗೆರೆ ಬಂದ್ ನ ಪ್ರಚಾರಕ್ಕೆ ಎಐಡಿಎಸ್ಓ ಅಖಿಲ ಭಾರತ ಅಧ್ಯಕ್ಷ  ವಿ.ಎನ್. ರಾಜಶೇಖರ್ ಅವರು ಇಂದು ಚಾಲನೆ ನೀಡಿದರು.

ಸ್ವಯಂ ಪ್ರೇರಿತ ದಾವಣಗೆರೆ ಬಂದ್‌ನ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸುವುದರ ಮುಖಾಂತರ ಬಂದ್ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದರು. 

ಇದೇ ವೇಳೆ ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಲೇಜಿನಲ್ಲಿ ಮಾತನಾಡಿದ ಅವರು, ರಾಜ್ಯದ ಬಡ ರೈತ, ಕಾರ್ಮಿಕರ ಮಕ್ಕಳು ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯೊಂದಿಗೆ ಬರುತ್ತಾರೆ ದಾವಣಗೆರೆಯ ದಾನಿಗಳು ಕಾಲೇ ಜಿಗೆ ದಾನ ನೀಡಿದ್ದಾರೆ. ಆದರೆ ಏಳು ದಶಕಗಳನ್ನು ಪೂರೈಸಿ, ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಯುಬಿಡಿಟಿ ಯನ್ನು ಸರ್ಕಾರ ಮಾರಲು ಹೊರಟಿದೆ ಎಂದರು.

ಕಾನೂನು ಬಾಹಿರವಾಗಿ, ಅತ್ಯಂತ ನಯವಂಚಕತನದಿಂದ ಈ ಸರ್ಕಾರಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಜಾರಿಗೊಳಿಸಲಾಗಿದೆ. ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳುವ ಸರ್ಕಾರದ ದುರುಳ ನೀತಿಯ ವಿರುದ್ಧ ಒಗ್ಗಟ್ಟಾಗಿ ನಿಂತು ಹೋರಾಟ ಮಾಡುತ್ತಿರುವ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿಗಳ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದು ಹೇಳಿದರು. 

ದಾವಣಗೆರೆ ಸೇರಿದಂತೆ ನಾಡಿನ ಗಣ್ಯರು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಎಲ್ಲಾ ಸಾಮಾನ್ಯ ಜನತೆಯ ಬೆಂಬಲವಿದೆ. 

ನಿಸ್ವಾರ್ಥ ಮನೋಭಾವದಿಂದ ಈ ಮಹಾನ್ ಸಂಸ್ಥೆಯನ್ನು ಉಳಿಸಲು ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳ ನಡೆ ಶ್ಲ್ಯಾಘನೀಯ ಎಂದು ಅಭಿನಂದಿಸಿದರು.

ನಂತರ ವಿದ್ಯಾರ್ಥಿಗಳ ವಿವಿಧ ತಂಡಗಳನ್ನು ರಚಿಸಿ ನಗರದಾದ್ಯಂತ ಪ್ರಚಾರಕ್ಕೆ ಯೋಜನೆ ರೂಪಿಸಲಾಯಿತು. 

ಎಐಡಿಎಸ್ಓನ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು, ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ.ಎಸ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ಸದಸ್ಯರಾದ ಅಖಿಲೇಶ್, ನಿಖಿಲ್ ಆದರ್ಶ್, ಗೌತಮ್, ಅಭಿಷೇಕ್, ಚಂದನಾ, ಮೇಘನಾ, ರೋಹಿತ್, ಜೀವನ್, ಯೋಗೇಶ್, ಸಂತೋಷ್ ಚೇತನ್ ಸೇರದಂತೆ ಎಲ್ಲಾ ಶಾಖೆಯ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!