ನಾಲ್ವರ ವಿರುದ್ಧ ಎಫ್.ಐ.ಆರ್. ದಾಖಲು
ದಾವಣಗೆರೆ, ಅ.8- ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಇದೇ ದಿನಾಂಕ 2 ರಂದು ರಾತ್ರಿ ವೇಳೆಯಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಸಿಮೆಂಟ್ ರಸ್ತೆ ಕಟ್ ಮಾಡುತ್ತಿದ್ದರು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ನೀಡಿದ್ದ ದೂರಿನನ್ವಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಜೆಸಿಬಿ ಡ್ರೈವರ್, ಬಸ್ ಶೆಲ್ಟರ್ ನಿರ್ಮಾಣಕ್ಕೆ ಸಂಬಂಧಿಸಿದ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ವಾರ್ಡ್ ಗೆ ಸಂಬಂಧಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ : ರಸ್ತೆ ಕಟ್ ಮಾಡುವ ವಿಚಾರ ತಿಳಿದ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದರು. ಇದು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕವನ್ನು ನೀಡಲು ಕೇಬಲ್ ಹಾಕುವ ಸಲುವಾಗಿ ರಸ್ತೆ ಕಟ್ ಮಾಡುತ್ತಿದ್ದೇವೆ ಎಂದು ಜೆಸಿಬಿ ಚಾಲಕ ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಅಲ್ಲೆ ಸಮೀಪದಲ್ಲಿ ಸರ್ವೀಸ್ ಗ್ಯಾಪ್ ಇದ್ದರೂ ಸಹ ಯಾಕೆ ರಸ್ತೆ ಅಗೆತ ಎಂದು ರಸ್ತೆ ಕಟಾವು ಮಾಡಲು ಬಂದವರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಎಂ.ಡಿ. ಅವರಿಗೆ ಕರೆ ಮಾಡಿದಾಗ ಕೆಲಸವನ್ನು ನಿಲ್ಲಿಸಲು ಕಾರ್ಮಿಕರಿಗೆ ಸೂಚಿಸಿದರಂತೆ.
ರಸ್ತೆ ಬಂದ್ ಮಾಡಲು ಪೊಲೀಸ್ ಅನುಮತಿ ಪಡೆಯದೇ ಹಾಗೂ ರಸ್ತೆ ಅಗೆತ ಮಾಡಲು ಪಾಲಿಕೆಯಿಂದ ಅನುಮತಿಯನ್ನೂ ಪಡೆಯದೇ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.