ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಗೆ ಡಾ. ಬಸವಂತಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದ ಕರ್ನಾಟಕ ಸರ್ಕಾರ
ದಾವಣಗೆರೆ, ಅ.8- ಎರಡ್ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ದರಾಗಿದ್ದ ಚನ್ನಗಿರಿ ತಾಲ್ಲೂಕಿನ ಹೊನ್ನೆಮರದಹಳ್ಳಿ ಗ್ರಾಮದವರಾದ ಹಿರಿಯ ವೈದ್ಯರೂ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ. ಎಂ.ಬಸವಂತಪ್ಪ ಅವರು ಇಂದು ಸಂಜೆ 7.30ಕ್ಕೆ ನಿಧನರಾದರು.
ಮೃತರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 9ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಹೊನ್ನೆಮರದಹಳ್ಳಿಯಲ್ಲಿರುವ ಅವರ ಸ್ವಂತ ತೋಟದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಪರಿಚಯ : ಹೊನ್ನೆಮರದಹಳ್ಳಿ ಗ್ರಾಮದ ಮಲ್ಲಜ್ಜರ ಸಿದ್ದಪ್ಪ ಮತ್ತು ಶ್ರೀಮತಿ ಹಾಲಮ್ಮ ದಂಪತಿ ಪುತ್ರರಾಗಿ 1951ರಲ್ಲಿ ಜನಿಸಿದ್ದ ಡಾ. ಬಸವಂತಪ್ಪ, ಹೊನ್ನೆಮರದಹಳ್ಳಿ ಮತ್ತು ನೀತಿಗೆರೆ ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ, ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಪ್ರೌಢ ಶಾಲೆಯಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿ ನಲ್ಲಿ ವೈದ್ಯಕೀಯ ಪದವಿಯನ್ನು ಪೂರೈಸಿದ್ದರು.
ತಂದೆಯ ಮಾತಿನಂತೆ ಸರ್ಕಾರಿ ಸೇವೆಗೆ ಹೋಗದೇ ಗ್ರಾಮೀಣ ಜನರಿಗೆ ಆರೋಗ್ಯ ಅರಿವು ಮೂಡಿಸಲು ನಿರ್ಧಾರ ಕೈಗೊಂಡ ಡಾ. ಬಸವಂತಪ್ಪ, ಸಂತೇಬೆನ್ನೂರಿನಲ್ಲಿ ಸಿದ್ದೇಶ್ವರ ಕ್ಲಿನಿಕ್ ಆರಂಭಿಸಿ, ಕಳೆದ 40 ವರ್ಷಗಳಿಂದ ನಲವತ್ತೈವತ್ತು ಹಳ್ಳಿಗಳ ಬಡ ಜನರಿಗೆ ಅತೀ ಕಡಿಮೆ 2 ರೂ. ಶುಲ್ಕದೊಂದಿಗೆ ಚಿಕಿತ್ಸೆ ನೀಡುವು ದರ ಮೂಲಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರಪರಿಚಿತರಾಗಿದ್ದರು.
ಹೊನ್ನೆಮರದಹಳ್ಳಿಯಲ್ಲಿರುವ ತಮ್ಮ 3 ಎಕರೆ ತೋಟದಿಂದ ಬರುವ ಆದಾಯವೇ ಮೂಲವಾಗಿದೆ. ವೈದ್ಯಕೀಯ ಸೇವೆಯನ್ನು ಬಡವರಿಗಾಗಿ ಮೀಸಲಿರಿಸಿದ್ದ ಅವರು, ಬಡವರ ಪಾಲಿನ ಆರೋಗ್ಯ ದೈವವಾಗಿದ್ದರು. ಡಾ. ಬಸವಂತಪ್ಪ ಅವರು ತಮ್ಮ ಮಗನನ್ನು ವೈದ್ಯನನ್ನಾಗಿ ಮಾಡುವ ಕನಸಿದ್ದರೂ ಅಷ್ಟೊಂದು ಶುಲ್ಕ ಕಟ್ಟಲು ಹಣವಿಲ್ಲದ ಕಾರಣಕ್ಕೆ ಇಂಜಿನಿಯರಿಂಗ್ ಓದಿಸಿದರು. ಮಗಳನ್ನು ಪದವಿವರೆಗೆ ಓದಿಸಿದ್ದರು.
`ಸಾಧನೆ ಇಲ್ಲದೇ ಸತ್ತರೆ ಸಾವಿಗೇ ಅವಮಾನ, ಆದರ್ಶವಿಲ್ಲದೇ ಸತ್ತರೆ ಬದುಕಿಗೇ ಅವಮಾನ’ ಎಂಬಂತೆ ಸದಾ ರೋಗಿಗಳ ಆರೈಕೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಡಾ. ಬಸವಂತಪ್ಪ, ಪ್ರತಿದಿನ ಸೂರ್ಯೋದಯದ ಕಾಲಕ್ಕೆ ಪ್ರಾರಂಭವಾಗುತ್ತಿದ್ದ ಕ್ಲಿನಿಕ್ಗೆ ರಾತ್ರಿ 10ರವರೆಗೂ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೋವಿಡ್ ಮಹಾಮಾರಿ ಆವರಿಸಿದ ಸಂದರ್ಭದಲ್ಲೂ ಹಗಲು – ರಾತ್ರಿ ನಿರಂತರವಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದು.
ಸರಳ – ಸಜ್ಜನಿಕೆಗೆ ಮತ್ತೊಂದು ಹೆಸರಾಗಿದ್ದ ಡಾ. ಬಸವಂತಪ್ಪ ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ತಮಗೆ ಸಂದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಬಸವಂತಪ್ಪ, ಪತ್ನಿ ಸುಜಾತ ಅವರ ಸಹ ಕಾರ ಅನನ್ಯ ಎಂದು ಭಾವುಕರಾಗಿ ನುಡಿದಿದ್ದರು.