ಲಯನ್ಸ್ ಕಾರ್ಯಕ್ರಮದಲ್ಲಿ ಹೆಚ್.ವಿ. ಮಂಜುನಾಥ ಸ್ವಾಮಿ
ದಾವಣಗೆರೆ, ಅ.6- ಮಾನವ ಹುಟ್ಟಿದಾಗಲೇ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರ ಹುಟ್ಟಿದೆ ಎಂದರೆ ತಪ್ಪಾಗಲಾರದು. ಆದಿ ಮಾನವರ ಕಾಲದಿಂದಲೂ ಮಳೆ, ಚಳಿ, ಗಾಳಿ ಮತ್ತು ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗುಹೆಯಲ್ಲಿ ಮತ್ತು ಮರಗಳ ಮೇಲೆ ಮನೆ ಕಟ್ಟಿ ವಾಸ ಮಾಡಲು ತೊಡಗಿದ ಮತ್ತು ಕಲ್ಲು, ಮಣ್ಣ, ನೀರು, ಮರಗಳನ್ನು ಬಳಸಿ ಗುಡಿಸಲು ಕಟ್ಟಿ ವಾಸ ಮಾಡ ತೊಡಗಿದ್ದು, ಇಂದು ಜಗತ್ಪ್ರಸಿದ್ಧ ದುಬೈನ ಬುರ್ಜ್ ಖಲೀಫಾ, ಚೀನಾದ ಸಾಂಗಹೈ ಟವರ್‌ಗಳಂತಹ ಜಗತ್‌ಪ್ರಸಿದ್ಧ ಎತ್ತರದ ಬಿಲ್ಡಿಂಗ್ ಕಟ್ಟುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಲಯನ್ಸ್ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ಇಂಜಿನಿಯರ್ ಹೆಚ್.ವಿ. ಮಂಜುನಾಥ ಸ್ವಾಮಿ ತಿಳಿಸಿದರು.
ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಏರ್ಪಡಿಸಿದ್ದ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಮಹತ್ವ ಮತ್ತು ಆಧುನಿಕ ಆವಿಷ್ಕಾರಗಳ ಕುರಿತು ಅವರು ಉಪನ್ಯಾಸ ನೀಡಿದರು.
ನಾವು ಕಣ್ತೆರೆದು ನೋಡಿದರೆ ಸಾಕು ಕಾಣುವ ಸುಂದರ ಕಟ್ಟಡಗಳು, ಸ್ಮಾರ್ಟ್ ರಸ್ತೆಗಳು, ಗಗನಚುಂಬಿ ಕಟ್ಟಡಗಳು, ಡ್ಯಾಂಗಳು, ಚಾನಲ್‌ಗಳು, ಸುರಂಗಗಳು, ಸೇತುವೆಗಳು, ರೈಲ್ವೆ ಸಂಪರ್ಕಗಳು, ನಗರಾಭಿವೃದ್ಧಿ ಯೋಜನೆಗಳು, ಸ್ಮಾರ್ಟ್ ಸಿಟಿ ನಿರ್ಮಾಣದ ಯೋಜನೆಗಳು ಹೀಗೆ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಊಹಿಸಲಾರದಷ್ಟು ಶರವೇಗದಲ್ಲಿ ಆಧುನಿಕ ತಂತ್ರಜ್ಞಾನದಿಂದ ಮತ್ತು ನವೀಕೃತ ಕಟ್ಟಡ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಆಧುನಿಕ ಜೀವನ ಶೈಲಿಗೆ ತಕ್ಕಂತೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ.
ಕೃಷಿ ಕ್ಷೇತ್ರ ಹೊರತುಪಡಿಸಿದರೆ ಅತಿ ದೊಡ್ಡ ಕ್ಷೇತ್ರವೆಂದರೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವಾಗಿದ್ದು, ಈ ವಿಸ್ತಾರವಾದ ಕ್ಷೇತ್ರದಲ್ಲಿ ಹೆಚ್ಚಿನ ಆರ್ಥಿಕ ವಹಿವಾಟು ಅಲ್ಲದೇ ಅನೇಕ ಜನರು ಅವಲಂಬಿತರಾಗಿದ್ದಾರೆ ಎಂದು ಮಂಜುನಾಥಸ್ವಾಮಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಮಹತ್ವ ತಿಳಿಸಿಕೊಟ್ಟರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಸಿ. ಅಜಯ್‌ನಾರಾಯಣ್, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಎ.ಎಸ್. ಮೃತ್ಯುಂಜಯ, ಆರ್.ಜಿ. ಶ್ರೀನಿವಾಸಮೂರ್ತಿ, ಎನ್.ವಿ. ಬಂಡಿವಾಡ, ಎನ್.ಸಿ. ಬಸವರಾಜ್, ವಾಲಿ ರವಿಶಂಕರ್, ಟಿ.ಎಂ. ಪಂಚಾಕ್ಷರಯ್ಯ, ಎನ್.ಆರ್. ನಾಗಭೂಷಣ್ ರಾವ್, ಈಶ್ವರಿ ಶಿವಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.