ಹರಿಹರ ಮಿನಿ ವಿಧಾನಸೌಧದಲ್ಲಿ ನಡೆದ ಗಾಂಧೀಜಿ – ಶಾಸ್ತ್ರೀಜಿ ಜಯಂತಿಯಲ್ಲಿ ಶಾಸಕ ಹರೀಶ್
ಹರಿಹರ, ಅ. 2- ಅಶಾಂತಿ ಸೃಷ್ಟಿಸುವುದ ರಿಂದ ಸ್ವಾತಂತ್ರ್ಯ ಸಿಗಬಹುದು ಎಂದುಕೊಂಡಿ ದ್ದವರಿಗೆ ಶಾಂತಿಯುತ ಹೋರಾಟದಿಂದಲೂ ದೇಶಕ್ಕೆ ಸ್ವಾತಂತ್ರ್ಯ ಸಿಗಬಹುದು ಎಂದು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು.
ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಹಾತ್ಮಗಾಂಧಿ ಅವರ 155ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಶಾಂತಿ ಮತ್ತು ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತ್ಯಾಗ-ಬಲಿದಾನ ಗಳನ್ನು ಇಂದು ಸ್ಮರಿಸಬೇಕಿದೆ ಎಂದರು.
ಮಹಾತ್ಮ ಗಾಂಧಿ ಅವರ ಗುಡಿಸಲು ಮುಕ್ತ ಹಾಗೂ ಸ್ವಚ್ಛ ಭಾರತದ ಕಲ್ಪನೆ ಬಹುತೇಕ ಈಡೇ ರಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಆರ್ಥಿಕವಾಗಿ ಹಿಂದುಳಿದಿತ್ತು. ಬಹುತೇಕ ಗ್ರಾಮಗಳು ಗುಡಿಸಲಿನಿಂದ ಹಾಗೂ ನಗರ ಪ್ರದೇಶಗಳು ಕೊಳಚೆಯಿಂದ ಕೂಡಿದ್ದವು. ಪ್ರಸ್ತುತ ದಿನಗಳಲ್ಲಿ ಶೇ. 95ರಷ್ಟು ಬದಲಾಗಿದೆ. ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ದೇಶಾದ್ಯಂತ ಸೆ. 14 ರಿಂದ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದರು.
ತಹಶೀಲ್ದಾರ್ ಗುರು ಬಸವರಾಜ್ ಮಾತನಾಡಿ, ಯಾವುದೇ ಯುದ್ದ ಸಲಕರಣೆ ಇಲ್ಲದೇ ಇರುವ ಕಾಲದಲ್ಲಿ ಮಾನವ ಸಂಪನ್ಮೂಲವನ್ನು ಬಳಸಿ ಸ್ವಾತಂತ್ರ್ಯ ಸಿಗಲು ಮಹಾತ್ಮ ಗಾಂಧಿ ಅವರು, ಸತ್ಯ, ಶಾಂತಿ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಅಂದು ಎಂಥ ಕಷ್ಟ ಬಂದರೂ ತಮ್ಮ ತತ್ವಗಳನ್ನು ತ್ಯಜಿಸದೇ, ಸರಳತೆ ಮೂಲಕ ದೇಶಕ್ಕೆ ಮಾದರಿಯಾಗಿದ್ದರು ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಹಾಗೂ ಪ್ರಪಂಚ ಕಂಡ ಅಪ್ಪಟ ದೇಶಭಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಪ್ರಾಮಾ ಣಿಕತೆ ಎಂಬ ಪದ ಬಳಕೆಗೆ ಅವರು ಸಾಕ್ಷಿಯಾ ಗಿದ್ದರು. ಸರಳತೆಯಿಂದ ಕೂಡಿದ್ದ ಅವರ ಬ್ಯಾಂಕ್ ಖಾತೆಯಲ್ಲಿ ನಿಗದಿತ ಹಣ ಕೂಡ ಇರುತ್ತಿರಲಿಲ್ಲ. ಎಲ್ಲೋ ರೈಲು ದುರಂತವಾದರೆ, ಅದರ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ಸಲ್ಲಿಸಿ ದಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ದೇಶದ ಜನತೆ ಹಸಿವಿನಿಂದ ಬಳಲುತ್ತಿದ್ದಾಗ ಜೈ ಜವಾನ್, ಜೈ ಕಿಸಾನ್ ಎಂಬ ಮೂಲ ಮಂತ್ರವನ್ನು ಪಠಿಸಿ ರೈತರ ಬಲವರ್ಧನೆಗೆ ಮುಂದಾದರು. ಪ್ರತಿಯೊಬ್ಬರೂ ಸೋಮವಾರ ಒಪ್ಪತ್ತಿನ ಊಟ ಬಿಡಲು ಕರೆ ನೀಡಿದ್ದರು. ಅದನ್ನು ಅಂದು ದೇಶದ ಜನತೆ ಒಪ್ಪಿ ಪಾಲಿಸಿದರು. ಅದರೆ ಇಂದಿನ ಕಾಲದಲ್ಲಿ ಸಭೆ ಸಮಾರಂಭಗಳಲ್ಲಿ ಬೇಕಾಬಿಟ್ಟಿಯಾಗಿ ಆಹಾರವನ್ನು ಹಾಳು ಮಾಡುವುದನ್ನು ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದರು.
ತಾಪಂ ಇಓ ಸುಮಲತಾ, ಬಿಇಓ ದುರುಗಪ್ಪ ಉಪಸ್ಥಿತರಿದ್ದರು. ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು.