ಜಗಳೂರು : ಆದಿ ಜಾಂಬವ ಮಾದಿಗ ಸಮಾಜ ಸೇವಾ ಸಂಘದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎ.ನಾರಾಯಣಸ್ವಾಮಿ
ಜಗಳೂರು, ಸೆ.30- ಶೋಷಿತ ಸಮುದಾಯಕ್ಕೆ ಸಂವಿಧಾನ ಬದ್ಧ ಒಳ ಮೀಸಲಾತಿ ಹಕ್ಕು ಜಾರಿಗೊಳಿಸಬೇಕು ಎಂದು ಮಾಜಿ ಸಂಸದ ಎ.ನಾರಾಯಣಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆದಿ ಜಾಂಬವ ಮಾದಿಗ ಸಮಾಜ ಸೇವಾ ಸಂಘದ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ನಿಗಮ, ಮಂಡಳಿ ಅಧ್ಯಕ್ಷರುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿನ ಪ್ರತಿ ರಾಷ್ಟ್ರೀಯ ಪಕ್ಷಗಳು ಒಳಮೀಸಲಾತಿ ಆಮಿಷಯೊಡ್ಡಿ ಮಾದಿಗ ಸಮಾಜವನ್ನು ಮತ ಬ್ಯಾಂಕ್ ಗಳನ್ನಾಗಿ ಪರಿವರ್ತಿಸಿಕೊಂಡಿವೆ. ಒಳ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಯಾವೊಬ್ಬ ರಾಜಕಾರಣಿಗಳೂ ಬೆನ್ನೆಲು ಬಾಗಿ ನಿಂತು ಧ್ವನಿಯಾಗದೇ ತಾತ್ಸಾರ ಮಾಡಿರುವುದು ಮಾದಿಗ ಸಮಾಜದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ ಸಮಾಜದ ನ್ಯಾಯಕ್ಕಾಗಿ ರಾಜಕೀಯ ಅಧಿಕಾರದ ಕುರ್ಚಿ ತೊರೆದಿರುವೆ. ದಕ್ಷಿಣ ಭಾರತದ ಎಲ್ಲಾ ಮೀಸಲಾತಿ ಆಯೋಗಗಳನ್ನು ಒಗ್ಗೂಡಿಸಿ, ಛಲದಿಂದ ಹೋರಾಟಕ್ಕೆ ಸಿದ್ದನಾಗಿದ್ದು, ಮಾದಿಗ ಸಮಾಜ ಜಾಗೃತವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಮಾದಿಗ ಸಮಾಜದಲ್ಲಿ ಅಸಹಿಷ್ಣುತೆ ಬಾಂಧವ್ಯದ ಕೊರತೆಯಿಂದ ರಾಜಕೀಯ ಅಧಿಕಾರ ಸಿಗುತ್ತಿಲ್ಲ.
ಒಗ್ಗಟ್ಟಿನ ಶಕ್ತಿಯಿದ್ದರೂ ಹೊಂದಾಣಿಕೆಯಿಲ್ಲದ ಕಾರಣ ಯಾವುದೇ ಪಕ್ಷವಾಗಲೀ ಮಾದಿಗರ ಕುರಿತು ಅಸಡ್ಡೆ ಮನೊಭಾವ ತೋರುತ್ತಿವೆ. ಸೈದ್ಧಾಂತಿಕ ಸಂಘಟನಾತ್ಮಕ ಹಿನ್ನಡೆಯಿಂದ ರಾಜಕೀಯ ಶಕ್ತಿ ಕುಂಠಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶವ್ಯಾಪಿ ಮಾದಿಗ ಸಮಾಜದಲ್ಲಿ 6000 ಸಂಘಟನೆಗಳು ಮುಂಚೂಣಿ ಯಲ್ಲಿದ್ದರೂ ನಾಯಕರ ಮಧ್ಯೆ ಸಾಮರಸ್ಯತೆಯಿಲ್ಲ.ಪಕ್ಷಾತೀತವಾಗಿ ಒಗ್ಗಟ್ಟಿನ ಪ್ರದರ್ಶನದ ಅಗತ್ಯವಿದೆ. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರ ಆದರ್ಶಗಳಡಿ ಮಾದಿಗ ಸಮಾಜ ರೂಪುಗೊಂಡರೆ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ತಳಸಮುದಾಯಗಳು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಲ್ಪಿಸಿದ ಸಂವಿಧಾನ ಬದ್ದ ಹಕ್ಕುಗಳ ಸದುಪಯೋಗ ಪಡೆದುಕೊಂಡು ಶಿಕ್ಷಣದೊಂದಿಗೆ ಮುಖ್ಯವಾಹಿನಿಗೆ ಬರಬೇಕಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದರು.
ಹಿರಿಯೂರು ಆದಿಜಾಂಬವ ಪೀಠದ ಷಡಕ್ಷರಿ ಮುನಿ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಕಾಂಗ್ರೆಸ್ ಮುಖಂಡರಾದ ಕೆ.ಪಿ.ಪಾಲಯ್ಯ, ಷಂಷೀರ್ ಅಹಮ್ಮದ್, ಮಾದಿಗ ಸಮಾಜದ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಶಂಭುಲಿಗಪ್ಪ, ಶಿವಕುಮಾರ್, ಪೂಜಾರ ಮರಿಯಪ್ಪ, ಸತೀಶ್, ಹಾಲೇಶ್, ಕುಬೇರಪ್ಪ, ಹೊನ್ನೂರಪ್ಪ, ಪಿ.ಮಂಜುನಾಥ್, ಪೂಜಾರ ಸಿದ್ದಪ್ಪ, ವಕೀಲ ಹನುಮಂತಪ್ಪ, ಎಚ್.ಆರ್.ಬಸವರಾಜ್, ಕುಬೇಂದ್ರಪ್ಪ ಮುಂತಾದವರು ಇದ್ದರು.