ಕೊಕ್ಕನೂರು ತಾಲ್ಲೂಕು ಕುರುಬರ ಸಂಘದ ಪ್ರತಿಭಾ ಪುರಸ್ಕಾರದಲ್ಲಿ ಜಿ.ಬಿ.ವಿನಯ್‌ಕುಮಾರ್ ಆತಂಕ
ಮಲೇಬೆನ್ನೂರು, ಸೆ.29- ಸಮಾಜದಲ್ಲಿ ಅಭಿವೃದ್ಧಿ ಕಾಣಬೇಕೆಂದರೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಆ ನಂತರ ಸಮಾಜದಲ್ಲಿ ಉದ್ಯಮಿಗಳು ತಯಾರಾಗಬೇಕು. ಅಧಿಕಾರಿಗ ಳಾಬೇಕು ಮತ್ತು ಯುವಕರು ರಾಜಕಾರಣಕ್ಕೆ ಬರಬೇಕೆಂದು ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಹೇಳಿದರು.
ಅವರು, ಭಾನುವಾರ ಕೊಕ್ಕನೂರು ಗ್ರಾಮದ ಪವನ ದೇವ ಕಲ್ಯಾಣ ಮಂಟಪದಲ್ಲಿ ಹರಿಹರ ತಾ. ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ 2ನೇ ವರ್ಷದ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನೀವು, ನಿಮ್ಮ ಶಿಕ್ಷಣದ ಆಧಾರದ ಮೇಲೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ನಿಮಗೆ ಇರುತ್ತದೆ. ಈ ನಿಟ್ಟಿನಲ್ಲಿ ವಿಮರ್ಶಾತ್ಮಕ ಯೋಚನಾ ಶಕ್ತಿ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಕನ್ನಡ, ಇಂಗ್ಲಿಷ್ ದಿನಪತ್ರಿಕೆಗಳನ್ನು ಓದಬೇಕು. ಜೊತೆಗೆ ದೊಡ್ಡ ಕನಸು, ಮಹತ್ವಾಕಾಂಕ್ಷೆ, ಸರಿಯಾದ ಮಾರ್ಗದರ್ಶನ ಇದ್ದರೆ ಐಎಎಸ್ ಅಥವಾ ಕೆಎಎಸ್ ಉತ್ತೀರ್ಣ ಮಾಡಿ, ಉನ್ನತ ಅಧಿಕಾರಿಗಳಾಗಬಹುದೆಂದು ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಯೋಗ್ಯರು ರಾಜಕಾರಣಕ್ಕೆ ಬರಬೇಕು. ಇಲ್ಲದಿದ್ದರೆ, ಅಯೋಗ್ಯರು ನಮ್ಮನ್ನು ಆಳುತ್ತಾರೆ ಎಂದು ವಿನಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಹಿರಿಯರ ಮತ್ತು ಯುವಕರ ಮಧ್ಯೆ ಇರುವ ಗ್ಯಾಪ್ ಮೊದಲು ಸರಿಪಡಿಸಬೇಕು ಎಂದು ಹಿತ ನುಡಿದರು.
ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್ ಅವರು, ಜ್ಞಾನ ಯಾವತ್ತೂ ಸ್ಥಿರವಾಗಿರುತ್ತದೆ. ಅಂತಹ ಜ್ಞಾನವನ್ನು ಪ್ರತಿಯೊಬ್ಬರೂ ಪಡೆದಾಗ ಮತ್ರ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮನಸ್ಸು ಮಾಡಿದರೆ ಮತ್ತು ಕನಸನ್ನು ಬೆನ್ನಟ್ಟಿದರೆ ಯಾವುದೂ ಅಸಾಧ್ಯವಲ್ಲ ಎಂದು ಮಂಜುನಾಥ್ ವಿದ್ಯಾರ್ಥಿಗಳಿಗೆ ಹೇಳಿದರು.
ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ಕಮಲಾಪುರ ಮಲ್ಲೇಶ್, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ.ರಾಜಶೇಖರ್, ಹರಿಹರ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ನಿಂಬಕ್ಕ ಚಂದಾಪೂರ್, ಚನ್ನಗಿರಿ ತಾ. ಕುರುಬ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿದರು.
ಶಿಕ್ಷಕ ಗದ್ದಿಗೆಪ್ಪ ಕುರಿಯರ್ ವಿಶೇಷ ಉಪನ್ಯಾಸ ನೀಡಿದರು. ಹರಿಹರ ತಾ. ಕುರುಬರ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಧಾರವಾಡದ ಮನ್ಸೂರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ಶ್ರೀ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.
ಹಿರಿಯ ವೈದ್ಯ ಡಾ. ಎಂ.ಹನುಮಂತಪ್ಪ, ಸಂಘದ ಸಂಚಾಲಕ ಡಾ.ಕರಿಬಸಯ್ಯ ಮಠದ, ಗೌರವಾಧ್ಯಕ್ಷ ಟಿ.ಗೋವಿಂದಪ್ಪ, ಉಪಾಧ್ಯಕ್ಷ ಹಾಲಿವಾಣದ ರೇವಣಸಿದ್ದಪ್ಪ, ಎಳೆಹೊಳೆ ಕರಿಬಸಪ್ಪ, ಕಾರ್ಯದರ್ಶಿ ಮಿಟ್ಲಕಟ್ಟೆ ಎನ್.ಚಂದ್ರಪ್ಪ, ಖಜಾಂಚಿ ಗಂಗನರಸಿ ರೇವಣ ಸಿದ್ದಪ್ಪ, ತಿಪ್ಪಣ್ಣ ಕಬ್ಬಾರ್, ಮಲ್ಲನಾಯ್ಕನಹಳ್ಳಿ ಶೇಖರಪ್ಪ, ಪೂಜಾರ್ ಬೀರಪ್ಪ, ಕುಣಿಬೆಳಕೆರೆ ಜಿ.ಸಿ.ರುದ್ರಪ್ಪ, ಹಾಲಿವಾಣದ ಡಿ.ಡಿ.ಚಿಕ್ಕಪ್ಪ, ಕುಂಬಳೂರಿನ ವೈ.ಶ್ರೀನಿವಾಸ್, ಸಮಾಜದ ಮುಖಂಡರಾದ ಪದ್ಮಪ್ಪ, ಕೆ.ಪಿ.ಗಂಗಾಧರ್, ಜಿ.ಡಿ.ಪರಮೇಶ್ವರಪ್ಪ, ನಾಗೇನಹಳ್ಳಿ ಮಾಲತೇಶ್, ಪಿ.ಹೆಚ್.ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.