ಆಸಕ್ತಿ ಬೆಳೆಸಿಕೊಂಡಲ್ಲಿ ವಿಜ್ಞಾನ ಗಣಿತಗಳು ಕಷ್ಟಕರವಲ್ಲ

ಆಸಕ್ತಿ ಬೆಳೆಸಿಕೊಂಡಲ್ಲಿ ವಿಜ್ಞಾನ ಗಣಿತಗಳು ಕಷ್ಟಕರವಲ್ಲ

ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೊ. ಎಂ.ಪಿ.ರುದ್ರಪ್ಪ

ದಾವಣಗೆರೆ, ಸೆ. 27- ಮಕ್ಕಳು ವಿಜ್ಞಾನ ವಿಷಯ ಅಭ್ಯಾಸ ಮಾಡಬೇಕೆಂದು ಬಹುತೇಕ ಪೋಷಕರ ಅಭಿಲಾಷೆ. ಆದರೆ, ವಿದ್ಯಾರ್ಥಿಗಳು ವಿಜ್ಞಾನ – ಗಣಿತಗಳು ಕಷ್ಟ ಎಂದುಕೊಳ್ಳುತ್ತಾರೆ. ಆಸಕ್ತಿ ಬೆಳೆಸಿಕೊಂಡಲ್ಲಿ ಇವು ಎಂದೂ ಕಷ್ಟಕರವಲ್ಲ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಂಪಿ ರುದ್ರಪ್ಪ ಹೇಳಿದರು. 

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ಅವರು ಮಾತನಾಡಿದರು.

ಒಂದು ಮನೆ ನಡೆಸುವುದಕ್ಕಿಂತ ಒಂದು ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರ. ಅಧ್ಯಾಪಕರು ವೇತನಕ್ಕಿಂತ ಆತ್ಮ ಸಂತೋಷಕ್ಕೆ ಪ್ರಾಧಾನ್ಯತೆ ನೀಡಿ ಪಾಠ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬವೆಂದು ಸ್ವೀಕರಿಸಿದರಲ್ಲಿ ಭಯ ಆತಂಕ ಇರುವುದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಹರಪನಹಳ್ಳಿಯ ಎಡಿಬಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎ.ಎಂ.ರಾಜಶೇಖರಯ್ಯ ಮಾತನಾಡಿ, ಅತಿಯಾದ ಮೊಬೈಲ್ ಮೋಹವು ಸಾಧನೆಗೆ ಅಡ್ಡಿಯಾಗಬಹುದು. ವಿಜ್ಞಾನ ತಂತ್ರಜ್ಞಾನಗಳು ಜೀವನ ಸುಗಮಗೊಳಿಸಬೇಕೇ ಹೊರತು ಜೀವನ ಸಮಾಧಾನಗಳನ್ನು ನಾಶ ಮಾಡ ಬಾರದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿಕೊಳ್ಳಬೇಕು. ಆಗ ಉತ್ತರವು ಸುಲಭವಾಗಿ ಹೊಳೆಯುತ್ತದೆ ಎಂದರಲ್ಲದೇ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು ಯಾವುದೇ ಸಾಧನೆಗೂ ಇದು ಕಡಿಮೆಯೇನಲ್ಲ ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ. ಜಿ.ಸಾಯಿ ವಿಶೇಷ ಆಹ್ವಾನಿತರಾಗಿದ್ದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಉಮೇಶ್ ಅವರು, ವಿದ್ಯಾರ್ಥಿಗಳು ಸಾಧನೆಯ ಸಂಕಲ್ಪ ಮಾಡಬೇಕು. ಶೈಕ್ಷಣಿಕ ಸಾಧನೆಯೇ ವಿದ್ಯಾರ್ಥಿಗಳು ಗುರುಗಳಿಗೆ ಕೊಡುವ ಗುರುದಕ್ಷಿಣೆ ಎಂದರು.

ಅಧ್ಯಾಪಕ ವರ್ಗದ ಎಲ್.ಎಸ್.ಶರ್ಮಿಳಾ, ಕೆ.ಸಿ.ವಿಜಯಕುಮಾರ್, ಬಿ.ಎಂ.ಶಿವಕುಮಾರ್, ಕೆ.ಸಿ.ಶಿವಶಂಕರ್, ಶ್ರುತಿ, ಚೇತನ್.ಹೆಚ್.ಜಿ, ಗಗನ.ಟಿ.ಎಂ, ರಾಜೇಶ್ವರಿ, ವಿದ್ಯಾರ್ಥಿ ಸಂಘದ ವಿಶ್ವನಾಥ್, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದು, ನಿರೂಪಣೆಯನ್ನು ಮೇಘ.ಎ.ಆರ್, ಅಕ್ಷತಾ ಮಾಡಿದರೆ, ಪ್ರಾರ್ಥನೆಯನ್ನು ಆರ್.ದರ್ಶನ್ ಹಾಡಿದರು. ಎಸ್.ಮೇಘನಾ ಸ್ವಾಗತ ಕೋರಿದರು. 

ಅತಿಥಿಗಳ ಪರಿಚಯವನ್ನು ವನಿತಾ, ಸುವಿಧಾ ಮಾಡಿದರೆ, ಪ್ರತಿಭಾ ಪುರಸ್ಕಾರವನ್ನು ಉಪನ್ಯಾಸಕ ಕೆ.ಸಿ.ಶಿವಶಂಕರ್ ನೆರವೇರಿಸಿದರು. ರೀತು ವಂದನೆ ಸಲ್ಲಿಸಿದರು. 

error: Content is protected !!