ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಎನ್. ರಂಗಸ್ವಾಮಿ ಸಂತಸ
ದಾವಣಗೆರೆ, ಸೆ. 27- ಬೆಳ್ಳಿ ಮಹೋತ್ಸವದ ಸನಿಹದಲ್ಲಿರುವ ಸವಿತಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 24 ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 13.97 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷರು, ವಕೀಲರೂ ಆದ ಎನ್ . ರಂಗಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಹಕಾರಿಯು ಷೇರು ಸಂಗ್ರಹಣೆಯಲ್ಲಿಯೂ ಸಹ ಗಮನಾರ್ಹ ಪ್ರಗತಿ ಕಂಡಿದ್ದು, ಆರ್ಥಿಕ ವರ್ಷಕ್ಕೆ 54.57 ಲಕ್ಷ ರೂ. ಷೇರು ಬಂಡವಾಳ, 3.69 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. 1.60 ಕೋಟಿ ರೂ.ನಿಧಿಗಳನ್ನು ಹೊಂದಿದೆ. 2 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ವಿನಿಯೋಗಿಸಲಾಗಿದೆ. 6.41 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ವರ್ಷಾಂತ್ಯಕ್ಕೆ ಸಹಕಾರಿಯು 3.53 ಕೋಟಿ ರೂ.ಗಳನ್ನು ಆಸ್ತಿ ಆಧಾರಿತ ಮತ್ತು ಜಾಮೀನು ಆಧಾರಿತ ಸಾಲವನ್ನು ಸದಸ್ಯರಿಗೆ ನೀಡಿದೆ ಎಂದು ತಿಳಿಸಿದರು.
ಸದಸ್ಯರಿಗೆ ಮರಣೋತ್ತರ ಪರಿಹಾರ ನಿಧಿ, ಛಾಪಾ ಕಾಗದ, ಡಿಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮತ್ತು ಸದಸ್ಯರು ಸೊಸೈಟಿಯ ಮೇಲೆ ಇಟ್ಟಿರುವ ನಂಬಿಕೆ, ಅಭಿಮಾನ ಹಾಗೂ ಪ್ರೀತಿಯು ಸೊಸೈಟಿಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ರಂಗಸ್ವಾಮಿ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿಯ ಸವಿತಾ ಸಮಾಜದ 58 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿಗಳಾದ ಚಂದ್ರಶೇಖರ್ ಎನ್ ಶಹಾಪುರ, ಬಾಪೂಜಿ ಆಸ್ಪತ್ರೆಯ ಮೆಡಿಕಲ್ ರೆಕಾರ್ಡ್ ಆಫೀಸರ್ ಎನ್. ವಿ. ರಾಜೇಂದ್ರಕುಮಾರ್ ಮತ್ತು ಸವಿತಾ ಸಮಾಜದ ಮುಖಂಡರಾದ ರಾಜು ಸಿ. ಇವರುಗಳಿಗೆ ಸನ್ಮಾನಿಸಲಾಯಿತು.
ಕಾರ್ಯದರ್ಶಿ ವೆಂಕಟೇಶ್ ನಾಯ್ಕ ಸ್ವಾಗತಿಸಿದರು. ನಿರ್ದೇಶಕರಾದ ಶ್ರೀಮತಿ ಸರೋಜ ಶಾಬಾದ್, ಶ್ರೀಮತಿ ಸಂಜೀವಮ್ಮ, ಎನ್ ಗೋವಿಂದರಾಜ್ ಮತ್ತು ಸಿ. ರಾಮಾಂಜನೇಯ ವಾರ್ಷಿಕ ವರದಿ ಮಂಡಿಸಿದರು. ಜಿ.ಎಸ್. ಪರಶುರಾಮ್ ವಂದಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಜಿ. ಸಿ. ಶ್ರೀನಿವಾಸ್, ನಿರ್ದೇಶಕರುಗಳಾದ ಜೆ. ಮಂಜುನಾಥ್, ಬಿ.ಕೆ. ಸಂತೋಷ್, ನಾರಾಯಣ್ ಎನ್. ಶಹಾಪುರ, ಕಾರ್ಯನಿರತ ನಿರ್ದೇಶಕರಾದ ಜಿ. ಶ್ರೀನಿವಾಸ್, ಕೆ. ಆನಂದ್, ಸಿಬ್ಬಂದಿಗಳಾದ ಆರ್. ಕರಿಬಸಪ್ಪ, ಸಿ. ರಾಘವೇಂದ್ರ, ಎನ್. ರಾಮಚಂದ್ರಪ್ಪ, ಆರ್. ಯಶವಂತ್ ರಾಜ್, ಕೆ.ಜೆ. ಅಜಯ್ ಹಾಜರಿದ್ದರು.