ರೈತರಿಗೆ ವಂಚಿನೆ : ಗ್ರಾಮೀಣ ಕೃಷಿ ಸಹಕಾರ ಸಂಘದ ವಿರುದ್ದ ಪ್ರತಿಭಟನೆ

ರೈತರಿಗೆ ವಂಚಿನೆ : ಗ್ರಾಮೀಣ  ಕೃಷಿ ಸಹಕಾರ ಸಂಘದ ವಿರುದ್ದ ಪ್ರತಿಭಟನೆ

ಹರಪನಹಳ್ಳಿ, ಸೆ. 27 – ತೌಡೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯ ಅಧಿಕಾರಿ ಪರಮೇಶ್ವರಪ್ಪ ಹಾಗೂ ಆಡಳಿತ ಮಂಡಳಿಯು ರೈತರ ಹೆಸರಿನಲ್ಲಿ ಪಹಣಿ, ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು, ರೈತರ ಸಾಲದ ಹಣವನ್ನು ರೈತರಿಗೆ ನೀಡದೇ ವಂಚಿಸಿದೆ ಎಂದು ಆರೋಪಿಸಿರುವ ಅಖಿಲ ಭಾರತ ಕಿಸಾನ್ ಸಭಾವು ಇಂದು ಪ್ರತಿಭಟನೆ ನಡೆಸಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿತು.

ಈ ವೇಳೆ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್‌ ಮಾತನಾಡಿ, ಆಡಳಿತ ಮಂಡಳಿ ಸುಮಾರು ವರ್ಷಗಳಿಂದ ನೂರಾರು ರೈತರಿಗೆ ಸಾಲ ನೀಡಿದ್ದೇವೆಂದು ಪಹಣಿ ಹಾಗೂ ಇತರೆ ದಾಖಲಾತಿ ಪಡೆದು, ಖಾಲಿ ಚೆಕ್ ಹಾಗೂ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡಿಸಿಕೊಂಡು ಅಲ್ಪ ಸ್ವಲ್ಪ ಸಾಲದ ಹಣ ನೀಡಿ, ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೈತರ ಹೆಸರಿನಲ್ಲಿ ಹೆಚ್ಚು ಸಾಲ ಮಂಜೂರು ಮಾಡಿಸಿಕೊಂಡು ಹಾಗೂ ಕೆಲ ರೈತರ ಪಹಣಿಗಳನ್ನು ಕಂಪ್ಯೂಟರ್‌ನಲ್ಲಿ ತೆಗೆದುಕೊಂಡು ರೈತರ ಗಮನಕ್ಕೆ ಬಾರದೇ, ಯಾವುದೇ ಸಹಿ ಮಾಡಿಸಿಕೊಳ್ಳದೇ, ಸಾಲ ಮಂಜೂರು ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. 

ಮಹಿಳಾ ಸ್ವ ಸಹಾಯ ಸಂಘಗಳ ಉಳಿತಾಯದ ಹಣ ಹಾಗೂ ಸಣ್ಣ ವ್ಯಾಪಾರಸ್ಥರ ಠೇವಣಿ ಹಣ ಬಾಂಡ್ ಮಾಡಿದ ಹಣ ಬ್ಯಾಂಕಿಗೆ  ಹಣ ಕಟ್ಟದೇ ಕೋಟಿ ಕೋಟಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಈ ಹಿಂದೆ ಪಡೆದ ಸಾಲ ಕಟ್ಟಬೇಕೆಂದು ನೋಟೀಸ್ ಕಳಿಸಿರುತ್ತಾರೆ. ನಮ್ಮ ಪಹಣಿಗಳಲ್ಲಿ ಸಾಲ ಪಡೆದಿದ್ದೀರಿ ಎಂದು ನಮೂದು ಆಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಅಖಿಲ ಭಾರತ ಕಿಸಾನ್ ಸಭಾದ ತಾಲ್ಲೂಕು ಅಧ್ಯಕ್ಷ ರಾಗಿಮಸಲವಾಡ ಹನುಮಂತಪ್ಪ  ಮಾತನಾಡಿ, ಸಂಘದ ಮುಖ್ಯ ಕಾರ್ಯನಿರ್ವ ಣಾಧಿಕಾರಿ ಪರಮೇಶ್ವರಪ್ಪರವರನ್ನು ಬಂಧಿಸಿ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ರೈತರ ಸಾಲದ, ಮಹಿಳಾ ಸ್ವಸಹಾಯ ಸಂಘದ ಉಳಿತಾಯದ, ಸಣ್ಣ ವ್ಯಾಪಾರಸ್ಥರ ಠೇವಣಿ ಮತ್ತು ಬಾಂಡ್ ಹಣವನ್ನು ವಾಪಾಸ್ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಭುಗೌಡ, ದುಗ್ಗತ್ತಿ ಹೆಚ್. ಹನುಮಂತಪ್ಪ, ಎ.ಎಂ. ಶಿವಯೋಗಯ್ಯ, ಪಿ.ಕೊಟ್ರೇಶ್, ಪಿ.ಪ್ರಕಾಶ್, ಪಿ. ಸಿದ್ದನಗೌಡ, ಶಂಭು ಲಿಂಗನಗೌಡ, ವೈ.ಕೊಟ್ರೇಶ್, ಆನಂದಗೌಡ್ರು,  ಎಂ.ಹೆಗ್ಗಪ್ಪ, ಮೈಲಪ್ಪ,  ಚೌಡಪ್ಪ,  ನಾಗರಾಜ  ಸೇರಿದಂತೆ ಇತರರು ಇದ್ದರು.  

error: Content is protected !!