ಮಲೇಬೆನ್ನೂರು ಪಟ್ಟಣದಲ್ಲಿ ಇಂದು ಶ್ರೀ ಕಾಲಭೈರವ ದೇವಸ್ಥಾನ ಹಾಗೂ ಶ್ರೀ ಏಕನಾಥೇಶ್ವರಿ ದೇವಾಲ ಯದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ಜೊತೆಯಲ್ಲೇ ಬೃಹತ್ ಶೋಭಾಯಾತ್ರೆ ಹಾಗೂ ವಿಸರ್ಜನೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಕಾಲಭೈರವ ಯುವಕ ಸಂಘ ಬೃಹತ್ ಶೋಬಾಯಾತ್ರೆ ಹಮ್ಮಿಕೊಂಡಿದ್ದು, ಈ ಬಗ್ಗೆ ಸಂಘದ ಉಪಾಧ್ಯಕ್ಷ ಓ.ಜಿ.ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಲೇಬೆನ್ನೂರು ಹಾಗೂ ಸುತ್ತಲಿನ ಗ್ರಾಮಸ್ಥರು ಈ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸುಮಾರು 5 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 11 ರಿಂದ ರಾತ್ರಿ 9 ಗಂಟೆವರೆಗೆ ಶೋಭಾಯಾತ್ರೆ ನಡೆಯಲಿದ್ದು, ಕಾಲಭೈರವ ದೇವಸ್ಥಾನದಿಂದ ಆರಂಭವಾಗಲಿರುವ ಶೋಭಾಯಾತ್ರೆ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ, ಭದ್ರಾ ನಾಲೆಯಲ್ಲಿ ಗಣೆಶನ ಮೂರ್ತಿ ವಿಸರ್ಜನೆ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ಸಂಗೀತಕ್ಕೆ ನೃತ್ಯ ಮಾಡುವ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೀರಗಾಸೆ ಹಾಗೂ ಜಾಂಜ್‍ಮೇಳ ಪ್ರಮುಖ ಆಕರ್ಷಣೆಯಾಗಲಿವೆ ಎಂದರು.
ದೇವಾಲಯದ ಬಳಿ ಅನ್ನ ಸಂತರ್ಪಣೆ ನಡೆಯಲಿದೆ. ಶೋಭಾ ಯಾತ್ರೆ ವೇಳೆ ಹಳೇ ವೃತ್ತದಲ್ಲಿ ಮುಸ್ಲಿಮರು ಮಜ್ಜಿಗೆ ವಿತರಣೆ ಮಾಡಲಿದ್ದಾರೆ.