ಸುಭದ್ರ ದುಡಿಮೆ ಬಂಡವಾಳದೊಂದಿಗೆ ಪ್ರಗತಿ ಪಥದಲ್ಲಿ ಸಂಚಿತ ಸೊಸೈಟಿ

ಸುಭದ್ರ ದುಡಿಮೆ ಬಂಡವಾಳದೊಂದಿಗೆ ಪ್ರಗತಿ ಪಥದಲ್ಲಿ ಸಂಚಿತ ಸೊಸೈಟಿ

ದಾವಣಗೆರೆ, ಸೆ. 26 – ಸಂಚಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 16 ಕೋಟಿ 30 ಲಕ್ಷ ರೂಪಾಯಿ ದುಡಿಮೆ ಬಂಡವಾಳದೊಂದಿಗೆ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷ ಟಿ.ಎಂ.ಪಾಲಾಕ್ಷ ಸಂಘದ ಮಹಾಸಭೆಯಲ್ಲಿ ಹೇಳಿದರು.

1,433 ಸದಸ್ಯರಿದ್ದು, ಷೇರು ಬಂಡವಾಳವು 48 ಲಕ್ಷ 17 ಸಾವಿರ ರೂ.ಗಳಷ್ಟು ಇರುತ್ತದೆ. ಕಾಯ್ದಿಟ್ಟ ನಿಧಿಯೇ 1 ಕೋಟಿ 57 ಲಕ್ಷ ರೂಪಾಯಿಗಳಿದ್ದು, ಠೇವಣಿಯು 13 ಕೋಟಿ 58 ಲಕ್ಷ ರೂಪಾಯಿಗಳಷ್ಟಿದೆ. 12 ಕೋಟಿ 31 ಲಕ್ಷ ರೂಪಾಯಿಗಳಷ್ಟು ಸಾಲ ಮುಂಗಡಗಳನ್ನು ನೀಡಿರುವ ತಮ್ಮ ಸೊಸೈಟಿಯು 2023-24ನೇ ಸಾಲಿನಲ್ಲಿ 17,73,000 ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ಸ್ವಂತ ಕಟ್ಟಡಕ್ಕಾಗಿ ಕೆ.ಬಿ.ಬಡಾವಣೆಯ ಸಿದ್ದಮ್ಮ ಪಾರ್ಕ್ ಬಳಿ ಖರೀದಿಸಿರುವ ನಿವೇಶನದಲ್ಲಿ ಬರುವ ವರ್ಷ ಕಟ್ಟಡಕ್ಕಾಗಿ ಅಡಿಪಾಯ ಹಾಕುವ ಯೋಜನೆಯು ಸಹ ಇದೆ ಎಂದರು.  

ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಕಲಾಪ್ರಕಾಶ ವೃಂದ ಸಹಕಾರ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಸಂಘದ 24ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎಂ.ವೀರಭದ್ರಯ್ಯ, ನಿರ್ದೇಶಕರಾದ ಜಿ.ವೈ.ಭೋಜರಾಜ್, ಎಸ್.ಹೆಚ್.ಪ್ರಕಾಶಚಾರಿ, ಎಂ.ಜಿ.ಪ್ರಕಾಶ್ ರಾವ್ ಉಪಸ್ಥಿತರಿದ್ದರು. 

ಪ್ರಾರ್ಥನೆಯನ್ನು ನಿರ್ದೇಶಕರಾದ ಎಂ.ಎಂ.ರಾಜಶ್ರೀ ಮತ್ತು ಪಿ.ಹೇಮಲತಾ ಹಾಡಿದರು. 

ಸ್ವಾಗತವನ್ನು ನಿರ್ದೇಶಕರಾದ ಎಸ್‌.ವಿ.ರುದ್ರಮುನಿ ಕೋರಿದರು.  

ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಂತರ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಸಂಘದ ಕಾರ್ಯದರ್ಶಿ ಜೆ.ವಿಜಯ್ ಕುಮಾರ್ ವಾಚಿಸಿದರು. ಲೆಕ್ಕ ಪರಿಶೋಧಕರ ವರದಿಯನ್ನು ನಿರ್ದೇಶಕರಾದ ಜೆ.ಸಂಜಯ್ ಕುಮಾರ್ ಪ್ರಸ್ತುತಪಡಿಸಿ, ಸಭೆಯ ಅನುಮೋದನೆ ಪಡೆದರು. 

ಲಾಭ ವಿಭಾಗಣೆಯನ್ನು ಹಾಗೂ ಲೆಕ್ಕಪರಿಶೋಧಕರ ನೇಮಕಾತಿಯನ್ನು ಸಭೆಯ ಮುಂದಿಟ್ಟು ನಿರ್ದೇಶಕರಾದ ವಿ.ಹೆಚ್.ಕುಮಾರ್ ಸಭೆಯ ಅನುಮೋದನೆ ಪಡೆದರು. ಮುಂಗಡಗಳ ಪರಿಶೀಲನೆಯನ್ನು ಸಭೆಯ ಮುಂದಿಟ್ಟು ನಿರ್ದೇಶಕಿ ಪಿ.ಹೇಮಲತಾ ಅನುಮೋದನೆ ಪಡೆದರು. 

ಸದಸ್ಯರ ಸಲಹೆಗಳ ನಂತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪಿ.ಅಮೃತ, ಕೆ.ಎಂ. ತರುಣ್, ಎನ್.ಎಸ್. ಪ್ರಜ್ವಲ್, ಜೆ.ಸಮಿತ, ಎ.ಟಿ. ರಾಶಿ, ಜಿ.ಎಸ್. ಅಮೂಲ್ಯ, ಸಮರೀನ್ ತಾಹೇರ್, ಜಿ.  ವಿ. ಸಿಂಚನ ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು. 

22 ವರ್ಷಗಳಿಂದ ಪ್ರಾಮಾಣಿಕವಾಗಿ ಸಂಘದ ಪಿಗ್ಮಿ ಸಂಗ್ರಹಕಾರರಾಗಿ ನಿವೃತ್ತರಾದ ಹೆಚ್.ವಿ. ಪ್ರಭುಲಿಂಗಯ್ಯ ಅವರನ್ನು ಗೌರವಿಸಲಾಯಿತು. 

ದಾವಣಗೆರೆ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. 

ನಿರ್ದೇಶಕರಾದ ಎಮ್. ರಾಜಶ್ರೀ ಮುರುಗೇಶ್ ವಂದನೆಗಳನ್ನು ಸಲ್ಲಿಸಿದರು. ಸಿಬ್ಬಂದಿ ವರ್ಗದ ಜೆ.ಹೆಚ್. ಚಂದ್ರಕಲಾ, ಟಿ.ಎಂ.ವಿನಯ್, ಹೆಚ್.ಜಿ.ವಿಜಯಕುಮಾರ್ ಮುಂತಾದವರು ಭಾಗವಹಿಸಿದ್ದರು.

error: Content is protected !!