ದಾವಣಗೆರೆ, ಸೆ. 26 – ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಹಿಡಿದಿವಷ್ಟು ಸರಳ ಮತ್ತು ಸೊಗಸಾದ ಪಠ್ಯಕ್ರಮ ಸಿದ್ಧಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಾಹಿತಿ ಚಿತ್ರದುರ್ಗದ ಡಾ. ಲೋಕೇಶ ಅಗಸನಕಟ್ಟೆ ಹೇಳಿದರು.
ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ ಮತ್ತು ಪ್ರಸಾರಾಂಗ, ಪದವಿ ಕಾಲೇಜು ಕನ್ನಡ ಆಧ್ಯಾಪಕರ ವೇದಿಕೆ ಹಾಗೂ ದಾವಣಗೆೆರೆ ವಿಶ್ವವಿದ್ಯಾನಿಲಯ ಇವರ ಸಂಯುಕ್ತಾಶ್ರಯದಲ್ಲಿ ಬಿ.ಎಸ್. ಚನ್ನಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2024 ನೇ ಸಾಲಿನ ರಾಜ್ಯ ಶಿಕ್ಷಣ ನೀತಿಯ ಪದವಿ ಕನ್ನಡ ಭಾಷಾ ಪಠ್ಯ ಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರದಲ್ಲಿ ಪಠ್ಯಾವಲೋಕನ ಮಾಡಿ ಮಾತನಾಡಿದರು.
ಕನ್ನಡ ತರಗತಿಗಳಿಗೆ ಗೈರಾಗುವ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಹಿಡಿದು ಕೂರಿಸುವಷ್ಟು ಸರಳ, ಸೊಗಸಾದ ಪಠ್ಯಕ್ರಮ ರಚನೆ ಮಾಡುವುದು ತುಂಬಾ ಅವಶ್ಯ ಎಂದರು.
ಅಧ್ಯಾಪಕರು ತಮ್ಮಲ್ಲಿರುವ ಜ್ಞಾನವನ್ನು ಧಾರೆ ಎರೆಯಲು ಇರಬಹುದಾದ ಮಾಧ್ಯಮ ಪಠ್ಯ. ತಮ್ಮಲ್ಲಿರುವ ಅರಿವು, ಆಲೋಚನೆಗಳು, ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುತ್ತಾ, ಅವರಲ್ಲಿರುವ ಮಾನವೀಯ ಸಂವೇದನೆಗಳನ್ನು ಜೀವಂತವಾಗಿಡುವುದು ಅಧ್ಯಾಪಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಈಗಿನ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತುಕೊಳ್ಳುತ್ತಿಲ್ಲ. ಏಕೆಂದರೆ ಮೊಬೈಲ್ ಮುಂತಾದ ತಾಂತ್ರಿಕ ಸಾಧನಗಳು ಅವರನ್ನು ತರಗತಿಗಿಂತಲೂ ಹೆಚ್ಚಾಗಿ ಆಕರ್ಷಿಸುತ್ತಿವೆ. ಇಂತಹ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕರೆತಂದು ಕೂರಿಸುವಂತಹ ಉತ್ತಮವಾದ ಪಠ್ಯ ರೂಪಿಸಬೇಕಾಗಿದೆ ಎಂದರು.
ಏಕಮುಖ ಪ್ರವಚನಗಳಿಂದ ವಿದ್ಯಾರ್ಥಿಗಳು ಕೇಳುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಪಠ್ಯದೊಂದಿಗೆ ಸಂವಾದ, ಅನುಸಂಧಾನಕ್ಕೆ ಅವಕಾಶ ಮಾಡಿಕೊಡುವ ಬೋಧನೆ ಮಾಡಬೇಕಾಗಿದೆ ಎಂದು ಹೇಳಿದರು.
ಕೇಂದ್ರದ ಎನ್‌ಇಪಿಯನ್ನು ವಿರೋಧಿಸಿ, ರಾಜ್ಯದ ಎಸ್‌ಇಪಿ ಪಠ್ಯಕ್ರಮ ಸ್ವೀಕರಿಸುವ ಈ ಹೊತ್ತಿನಲ್ಲಿ ಪಠ್ಯ ರಚಿಸುವಾಗ ಅತ್ಯಂತ ಎಚ್ಚರಿಕೆ ವಹಿಸುವ ಅವಶ್ಯವಿದೆ. ಕೋಮು ಸೌಹಾರ್ದ, ಸಾಮರಸ್ಯ ಕದಡುವ ಹಾಗೂ ದೇಶದ ಏಕತೆ, ಅಖಂಡತೆಗೆ ಭಂಗ ಉಂಟುಮಾಡುವ ಅಂಶಗಳಿವೆ ಎಂಬ ಕಾರಣಕ್ಕಾಗಿಯೇ ಎನ್‌ಇಪಿಯನ್ನು ತಿರಸ್ಕರಿಸಲಾಗಿದೆ. ಅಂತಹ ಅಂಶಗಳು ನೂತನ ಪಠ್ಯಕ್ರಮದಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕೆಂದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ, ತರಾತುರಿಯಲ್ಲಿ ಪಠ್ಯಪು ಸ್ತಕ ಬಿಡುಗಡೆ ಮಾಡುವ ಬದಲು, ಮುಂದಿನ ವರ್ಷ ಬಿಡುಗಡೆ ಮಾಡಬಹುದಾದ ಪಠ್ಯಪುಸ್ತಕ ಗಳನ್ನು ಈಗಿನಿಂದಲೇ ಸಿದ್ಧಪಡಿಸಿಟ್ಟುಕೊಳ್ಳಬೇಕು. ಆಗ ಅದರಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಕಾಲಾವಕಾಶ ಸಿಗುತ್ತದೆ ಎಂದರು.
ಪಠ್ಯಪುಸ್ತಕಗಳನ್ನು ಪರಿಶೀಲಿಸಲು ಹಿರಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಸಾಹಿತ್ಯದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಸರಳ ಗದ್ಯ, ಪದ್ಯ, ಕಥೆ, ಕಾದಂಬರಿ ಆಯ್ಕೆ ಮಾಡುವ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.
ಇದೇ ವೇಳೆ ಬಿ.ಎ., ಬಿ.ಕಾಂ., ಬಿ.ಎಫ್.ಡಿ., ಬಿ.ಡಬ್ಲ್ಯೂ.ಎಸ್. ಗೆ ಸಂಬಂಧಿಸಿದ `ಕನ್ನಡ ಅಸ್ಮಿತೆ’, `ಕನ್ನಡ ವಿವೇಕ’, `ಕನ್ನಡ ಪ್ರಜ್ಞೆ’, `ಕನ್ನಡ ಅರಿವು’ ಎಂಬ ನಾಲ್ಕು ಪಠ್ಯಗಳನ್ನು ಲೋಕಾರ್ಪಣೆಗೊಳಿಸ ಲಾಯಿತು.ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಸಿ. ಗುರು ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಶಿವಕುಮಾರ್ ಕಣಸೋಗಿ, ಸ್ನಾತಕ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ಜೋಗಿನಕಟ್ಟೆ ಮಂಜುನಾಥ್, ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಕಾರ್ಯದರ್ಶಿ ಡಾ.ಎಸ್.ಆರ್. ಅಂಜಿನಪ್ಪ, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಷಣ್ಮಖ ಮತ್ತಿತರರು ಉಪಸ್ಥಿತರಿದ್ದರು.