ಹೆಚ್ಎಂಎಸ್ ಕಾನ್ವೆಂಟ್‌ನ `ಶ್ರಾವಣ ಸಂಭ್ರಮ’ದಲ್ಲಿ ನೊಣವಿನಕೆರೆಯ ಶ್ರೀ ಕರಿವೃಷಭ ಮಹಾಸ್ವಾಮೀಜಿ
ದಾವಣಗೆರೆ, ಸೆ. 26 – ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಇಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಮ.ನಿ.ಪ್ರ.ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಕಾಯಿಪೇಟೆ ಹಿರೇಮಠದ ಆವರಣದಲ್ಲಿ ದೇವನಗರಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಹೆಚ್ಎಂಎಸ್ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಶ್ರಾವಣ ಸಂಭ್ರಮ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸನಾತನ ಹಿಂದೂ ಧರ್ಮದಲ್ಲಿ ಬರುವ ಶ್ರಾವಣ ಮಾಸದಿಂದ ಆರಂಭಗೊಳ್ಳುವ ವರ್ಷದ ಪ್ರತಿಯೊಂದು ಹಬ್ಬಗಳೂ ತುಂಬಾ ವಿಶೇಷತೆ ಗಳಿಂದ ಕೂಡಿದ್ದು, ಈ ಹಬ್ಬಗಳ ಮಹತ್ವವನ್ನು ಶ್ರೀಗಳು ಎಳೆ-ಎಳೆಯಾಗಿ ಮಕ್ಕಳು ಮತ್ತು ಪೋಷಕರ ಮುಂದೆ ಬಿಡಿಸಿಟ್ಟರಲ್ಲದೇ, ಭವಿಷ್ಯದ ಪ್ರಜೆಗಳಾದ ಮಕ್ಕಳ ಲಾಲನೆ-ಪಾಲನೆ ಮಾಡುವಲ್ಲಿ ಪೋಷಕರು ಮತ್ತು ಶಿಕ್ಷಕರು ವಹಿಸಬೇಕಾದ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು.
ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯವರು ನಾಗರಪಂಚಮಿ ಹಬ್ಬದಂದು ಶಾಲಾ ಆವರಣದಲ್ಲಿರುವ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆಗಳಿಗೆ ಮಕ್ಕಳಿಂದ ಹಾಲನ್ನು ಹಾಕಿಸಿರುವುದು, ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದಂದು ಮಕ್ಕಳಿಂದ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಿರುವುದು, ಮಂಗಳಗೌರಿ, ಶುಕ್ರಗೌರಿ, ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಎಲ್ಲಾ ಹಬ್ಬಗಳನ್ನು ಮಕ್ಕಳೊಂದಿಗೆ ಆಚರಿಸುವ ಸಂಪ್ರಾದಯವನ್ನು ಇಟ್ಟುಕೊಂಡು ಅವರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಹೆಚ್ಎಂಎಸ್ ಕಾನ್ವೆಂಟ್ ಶಾಲೆಯ ಶಿಕ್ಷಕರು ಮತ್ತು ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿ ಕಾರ್ಯವನ್ನು ಶ್ರೀಗಳು ಶ್ಲ್ಯಾಘಿಸಿದರು.
ಶಿಸ್ತು, ಸಂಸ್ಕಾರ, ಶಿಕ್ಷಣವನ್ನು ತನ್ನ ಮುಖ್ಯ ಗುರಿಯನ್ನಾಗಿಸಿ ಕೊಂಡಿರುವ ಈ ಸಂಸ್ಥೆಯು ಸಾಮಾಜಿಕ ಚಿಂತನೆವುಳ್ಳವರಾಗಿದ್ದ ಲಿಂ.ವೇ. ಶ್ರೀ ಹೆಚ್.ಎಂ. ಸೋಮನಾಥಯ್ಯ ಅವರ ಹೆಸರಿನಲ್ಲಿ ದಾವಣಗೆರೆ ಹಳೇ ಭಾಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿರುವ ಹೆಚ್ಎಂಎಸ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನ-ಮಾನ ಪಡೆಯಬೇಕು ಎಂದು ಶ್ರೀಗಳು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಮಕ್ಕಳ ತಾಯಂದಿರು ಮತ್ತು ಶಿಕ್ಷಕಿಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾ ಯಿತು. ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. ಅರಿಶಿಣ-ಕುಂಕುಮ ಸಂಕೇತವಾದ ಹಳದಿ-ಕೆಂಪು ಬಣ್ಣದ ಸೀರೆಯನ್ನುಟ್ಟು ಶಾಲಾ ಶಿಕ್ಷಕಿಯರು ಶ್ರಾವಣ ಮಾಸವನ್ನು ಸಂಭ್ರಮಿಸಿದರು. ಗ್ರಾಮೀಣ ಸೊಬಗಿನ ಭರತನಾಟ್ಯ, ಕೋಲಾಟ, ಜನಪದ ಗೀತೆಗಳು, ನಾಟಕ-ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸ್ವತಃ ನಿರ್ಮಿಸಿದ ಹಳ್ಳಿ ವಾತಾವರಣದ ವಸ್ತು ಪ್ರದರ್ಶವನ್ನೂ ಸಹ ಉದ್ಘಾಟಿಸಲಾಯಿತು.
ವಿದ್ಯಾರ್ಥಿನಿ ಕು. ಮೇಘನಾ ಪ್ರಾರ್ಥನೆ ನಂತರ ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಹೆಚ್.ಎಂ. ಹೇಮಲತಾ ರುದ್ರಮುನಿಸ್ವಾಮಿ ಸ್ವಾಗತಿಸಿದರು. ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆಗಿರುವ ಹೆಚ್ಎಂಎಸ್ ಕಾನ್ವೆಂಟ್ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಹೆಚ್.ಎಂ. ರುದ್ರಮುನಿ ಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯೋಪಾ ಧ್ಯಾಯ ಹರ್ಷ ಹಾಗೂ ಶಿಕ್ಷಕಿ ಶ್ರೀಮತಿ ಶಾರದಾ ಶ್ರಾವಣ ಮಾಸದ ಕುರಿತಂತೆ ಮಾತನಾಡಿದರು.
ವಿದ್ಯಾರ್ಥಿನಿಯರಾದ ಕು. ಪ್ರತೀಕ್ಷಾ ಮತ್ತು ಕು. ಸುದೀಪ ಕಾರ್ಯಕ್ರಮ ನಿರೂಪಿಸಿದರು. ರಾಜು ಪಿ. ಮಠದ್, ಚನ್ನಯ್ಯ, ಹೆಚ್.ಎಂ. ಪ್ರೀತಮ್, ಹೆಚ್.ಎಂ. ಪ್ರೀತಿ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಲೀಲಾವತಿ ವಂದಿಸಿದರು.